10 ವರ್ಷವಾದರೂ ಮಂಜೇಶ್ವರ ತಾಲೂಕು ಕಚೇರಿಗೆ ಸ್ವಂತ ಕಟ್ಟಡವಿಲ್ಲ: ಎನ್‌ಜಿಒ ಅಸೋಸಿಯೇಶನ್‌ನಿಂದ ಪ್ರತಿಭಟನೆ

ಉಪ್ಪಳ: ಕಳೆದ 10 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯಾ ಚರಿಸುತ್ತಿರುವ ಮಂಜೇಶ್ವರ ತಾಲೂಕು ಕಚೇರಿಗೆ ಸ್ಥಳ ಕಂಡುಕೊಂಡು ಹೊಸ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿ ಕೇರಳ ಎನ್‌ಜಿಒ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಎ.ಟಿ ಶಶಿ ಆಗ್ರಹಿಸಿದರು.  ಮಂಜೇಶ್ವರ ತಾಲೂಕು ಕಚೇರಿಯ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಅಸೋಸಿಯೇಶನ್‌ನ ಮಂಜೇಶ್ವರ ಶಾಖಾ ಸಮಿತಿ ಆಯೋಜಿಸಿದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.

೬೫ರಷ್ಟು ನೌಕರರು ಕೆಲಸ ಮಾಡುವ ತಾಲೂಕು ಆಡಳಿತ ಕೇಂದ್ರದಲ್ಲಿ ನೀರು, ವಿದ್ಯುತ್ ಅಲಭ್ಯವಿದೆ. ಪ್ರಾಥಮಿಕ ಅಗತ್ಯಕ್ಕಿರುವ ಶುಚಿಗೃಹ ಸೌಕರ್ಯವೂ ಇಲ್ಲಿಲ್ಲ. ಕಚೇರಿ ಕೆಲಸಗಳೆಲ್ಲಾ ಡಿಜಿಟಲ್ ರೂಪದಲ್ಲಾದರೂ ಇಲ್ಲಿ ಇಂಟರ್‌ನೆಟ್ ಲಭ್ಯವಿಲ್ಲ. ಈ ಕಚೇರಿ ವ್ಯಾಪ್ತಿಯಲ್ಲಿ ಏಳರಷ್ಟು ಪಂಚಾಯತ್‌ಗಳು ಒಳಗೊಂಡಿದ್ದು, ಇಲ್ಲಿ ಒಟ್ಟು ಒಂದು ವಾಹನ ಮಾತ್ರವೇ ಇದೆ. ಮೂರನೇ ಮಹಡಿಯಲ್ಲಿ ಕಾರ್ಯಾಚರಿಸುವ ಕಚೇರಿಗೆ ತಲುಪಬೇಕಿದ್ದರೆ ಭಿನ್ನಸಾಮರ್ಥ್ಯದವರು, ವೃದ್ಧರು ಸಂಕಷ್ಟಪಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬ್ರಾಂಚ್ ಉಪಾಧ್ಯಕ್ಷ ಒ.ಡಿ. ಜಯನ್ ಅಧ್ಯಕ್ಷತೆ ವಹಿಸಿದರು. ಅಸೋಸಿಯೇಶನ್ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಕೆ.ಸಿ. ಸುಜಿತ್ ಕುಮಾರ್, ಜೋಯ್ ಫ್ರಾನ್ಸಿಸ್, ಲೋಕೇಶ್ ಎಂ.ಬಿ. ಆಚಾರ್, ಕೆ. ಅಬ್ದುಲ್ ಕರೀಂ, ವಿ.ಎಂ. ರಾಜೇಶ್, ಗುರುರಾಜ್ ಮಾವುಂಗಾಲ್, ಕೆ.ಆರ್. ಪ್ರಮೋದ್, ಆರ್. ರಾಜೇಶ್, ಕೆ. ಇಂದಿರಾ, ಸಿ. ಚಾಂದ್‌ನಿ, ಮೊಹಮ್ಮದ್ ಹಾರೀಸ್ ನೇತೃತ್ವ ನೀಡಿದರು.

RELATED NEWS

You cannot copy contents of this page