17ರ ಬಾಲಕಿಗೆ ಕಿರುಕುಳ ತಾಯಿಯ ಪ್ರಿಯತಮ ಬಂಧನ

ಮಂಜೇಶ್ವರ: 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ತಾಯಿಯ ಪ್ರಿಯತಮನನ್ನು ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಕೊಡ್ಲಮೊಗರುನಲ್ಲಿ ವಾಸಿಸುವ ಮುಹಮ್ಮದ್ ಹನೀಫ್ (34) ಎಂಬಾತ ಬಂಧಿತ  ಆರೋಪಿ ಯಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾದ ಬಾಲಕಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯ ತಂದೆ ಈ ಹಿಂದೆ ಮೃತಪಟ್ಟಿದ್ದರು. ಅನಂತರ ಬಾಲಕಿಯ ತಾಯಿಯೊಂದಿಗೆ ಮುಹಮ್ಮದ್ ಹನೀಫ್ ವಾಸಿಸ ತೊಡಗಿದ್ದನು. ಇತ್ತೀಚೆಗೆ ತಾಯಿಯೂ ಸಾವಿಗೀಡಾಗಿದ್ದಾರೆ. ಅನಂತರ ಬಾಲಕಿ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಇತ್ತೀಚೆಗೆ ಬಾಲಕಿಯ ಮೊಬೈಲ್ ಫೋನ್ ಬಿದ್ದು ಹಾನಿಗೀಡಾಗಿತ್ತು. ಅದನ್ನು ದುರಸ್ತಿಗೊಳಿಸಿದಾಗ ಅದರಲ್ಲಿ ಹಲವು ಅಶ್ಲೀಲ ದೃಶ್ಯಗಳು ಪತ್ತೆಯಾಗಿತ್ತು. ಈ ಬಗ್ಗೆ ಬಾಲಕಿಯಿಂದ ಹೇಳಿಕೆ ದಾಖಲಿಸಿದಾಗ ಕಿರುಕುಳಕ್ಕೊಳಗಾದ ವಿಷಯ ಬಹಿರಂಗಗೊಂಡಿತ್ತು. ಇದರಂತೆ ಲಭಿಸಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

You cannot copy contents of this page