23,000 ಕಿ.ಮೀ. ಬೈಕ್ ಸವಾರಿ ನಡೆಸಿ ದಾಖಲೆಗೈದ ಕುಂಬಳೆಯ ಅಮೃತ ಜೋಷಿಯಿಂದ ಯುಎಇ, ಒಮಾನ್‌ನಲ್ಲೂ ಬೈಕ್ ಸವಾರಿ

ಕುಂಬಳೆ: ಸಣ್ಣ ಪ್ರಾಯದಲ್ಲೇ ಅತೀ ಹೆಚ್ಚು ದೂರ ಏಕಾಂಗಿಯಾಗಿ ಬೈಕ್ ಸವಾರಿ ನಡೆಸಿ ಗಿನ್ನೆಸ್ ಬುಕ್‌ನಲ್ಲಿ ಹೆಸರು ದಾಖಲುಗೊಂಡ ಕುಂಬಳೆ ನಿವಾಸಿ ಅಮೃತ ಜೋಷಿ ಇದೀಗ ಯುಎಇ, ಒಮಾನ್‌ನಲ್ಲೂ ಬೈಕ್ ಸವಾರಿ ಆರಂಭಿಸಿದ್ದಾರೆ. ಈ ತಿಂಗಳ 5ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಅಮೃತ ದುಬಾಗೆ ತೆರಳಿದ್ದಾರೆ. ತನ್ನ ಬೈಕನ್ನು ಅದಕ್ಕಿಂತ ಮುಂಚೆಯೇ ಅಮೃತ ಕೊಚ್ಚಿಯಿಂದ ದುಬಾಗೆ  ಕಳುಹಿಸಿಕೊಟ್ಟಿದ್ದರು.  ದುಬಾ ಸಂದರ್ಶನದ ಅಂಗವಾಗಿ ಕರಾಮಕ್ಕೆ ತಲುಪಿದ ಅಮೃತ ಅಲ್ಲಿಯೂ ಬೈಕ್‌ನಲ್ಲಿ ಸಂಚರಿಸಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ಅನಂತರ ನಿನ್ನೆ ಅಲ್ಲಿಂದ ಒಮಾನ್‌ಗೆ ತೆರಳಿದ್ದಾರೆ. ಅಲ್ಲಿಯೂ ಬೈಕ್‌ನಲ್ಲಿ ವಿವಿಧ ಪ್ರಧಾನ ಸ್ಥಳಗಳಿಗೆ ಸಂದರ್ಶಿಸಿದ ಬಳಿಕ ಮತ್ತೆ ದುಬಾಗೆ ಮರಳಿದ್ದಾರೆ. ಅನಂತರ ಯುಎಇಯ ಏಳು ಎಮಿರೇಟ್ಸ್‌ಗಳಿಗೂ ಬೈಕ್‌ನಲ್ಲೇ ತೆರಳುವರು. ಹೀಗೆ ವಿವಿಧೆಡೆ ಬೈಕ್‌ನಲ್ಲಿ  ಸಂಚರಿಸಿ ಸಾಧನೆಗೈದು ಈ ತಿಂಗಳ 26ರಂದು ಕುಂಬಳೆಗೆ ಮರಳಿ ತಲುಪಲಿದ್ದಾರೆ.

2022ರಲ್ಲಿ ಭಾರತದಲ್ಲಿ 23,000 ಕಿಲೋ ಮೀಟರ್ ದೂರವನ್ನು ಬೈಕ್‌ನಲ್ಲಿ ಸಂಚರಿಸಿ ಅಮೃತ ಗಿನ್ನೆಸ್ ಬುಕ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸಣ್ಣ ಪ್ರಾಯದಲ್ಲೇ ಬೈಕ್ ಸಂಚಾರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ ಅಮೃತ ಅನಂತರ ಬೈಕ್ ಹಾಗೂ ಬೈಕ್ ಸವಾರಿಯನ್ನು ತನ್ನ ಜೀವನದ ಭಾಗವಾಗಿಸಿಕೊಂಡರು. ಅವರಿಗೆ ಮನೆಯವರೂ ಸಹಕಾರ ನೀಡಿದರು. ಕುಂಬಳೆ -ಬದಿಯಡ್ಕ ರಸ್ತೆಯ ದಿ| ಅಶೋಕ್ ಜೋಷಿ- ಅನ್ನಪೂರ್ಣ ದಂಪತಿಯ ಪುತ್ರಿಯಾದ ಅಮೃತ ಜೋಷಿಗೆ ಅಜಯ್ ಜೋಷಿ, ಅಪೂರ್ವ ಜೋಷಿ ಎಂಬೀ ಸಹೋದರ ಸಹೋದರಿಯರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page