ಪಸರಿಸತೊಡಗಿದೆ ಹಳದಿ ಕಾಮಾಲೆ ಜ್ವರ: ಚಿಕಿತ್ಸೆ ಪಡೆದಿದ್ದು 81 ಮಂದಿ

ಕಾಸರಗೋಡು: ಜಿಲ್ಲೆಯಲ್ಲಿ ಹಳದಿ ಕಾಮಾಲೆ ಜ್ವರ (ಹೈಪರೈಟೀಸ್-ಎ) ಹರಡತೊಡಗಿದೆ. 2024ರಲ್ಲಿ ಈ ತನಕದ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ ಜ್ವರಕ್ಕೆ 58 ಮಂದಿಗೆ ಹಳದಿ ಕಾಮಾಲೆ ಜ್ವರ ತಗಲಿರುವುದನ್ನು ದೃಢಪಡಿಸಲಾಗಿದೆ. ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಈ ಜ್ವರದ ಲಕ್ಷಣ ಉಂಟಾದ ಹಲವರು ಈ ಅವಧಿಯಲ್ಲಿ ಚಿಕಿತ್ಸೆ ಪಡೆದಿದ್ದು, ಆ ಮೂಲಕ ಒಟ್ಟು ಚಿಕಿತ್ಸೆ ಪಡೆದವರ ಸಂಖ್ಯೆ ಈಗ 81ಕ್ಕೇರಿದೆ.
ಮೊಗ್ರಾಲ್ ಪುತ್ತೂರು ಪ್ರದೇಶದಲ್ಲಿ ಅತೀ ಹೆಚ್ಚು ಹಳದಿ ಕಾಮಾಲೆ ಜ್ವರ ಕಾಣಿಸಿಕೊಂಡಿದೆ. ಇಲ್ಲಿ ಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು ಮಂದಿ ಯಲ್ಲಿ ಈ ಜ್ವರ ಕಾಣಿಸಿಕೊಂಡಿದೆ. ಅಂದರೆ ಮಾರ್ಚ್ ತಿಂಗಳಲ್ಲಿ ಮಾತ್ರವಾಗಿ 24 ಮಂದಿಯಲ್ಲಿ ಹಳದಿ ಕಾಮಾಲೆ ತಗಲಿರುವುದನ್ನು ದೃಢೀಕರಿಸಲಾಗಿದೆ. ಜನವರಿಯಲ್ಲಿ 18, ಫೆಬ್ರವರಿ- 5 ಮತ್ತು ಎಪ್ರಿಲ್ನಲ್ಲಿ 11 ಮಂದಿ ಈ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ.
2022-23ನೇ ವರ್ಷದಲ್ಲಿ ಜಿಲ್ಲೆಯ ಎಲ್ಲೂ ಹಳದಿ ಕಾಮಾಲೆ ಜ್ವರ ವರದಿಯಾಗಿಲ್ಲ. 2022ರಲ್ಲಿ 2 ಮತ್ತು 2023ರಲ್ಲಿ ಇಬ್ಬರಲ್ಲಿ ಈ ಜ್ವರ ಲಕ್ಷಣ ಕಾಣಿಸಿಕೊಂಡಿತ್ತು.
ಮಲೀನ ಜಲ ಮತ್ತು ಆಹಾ ರದ ಮೂಲಕ ಈ ಜ್ವರ ತಗಲುತ್ತಿದೆ. ಈ ಜ್ವರ ಕಾಣಿಸಿಕೊಂಡವರ ಕಣ್ಣಿನಲ್ಲಿ ಮೊದಲು ಹಳದಿ ಬಣ್ಣ ಗೋಚರಿಸುತ್ತದೆ. ಮೂತ್ರದ ಬಣ್ಣ ಬದಲಾಗಿ, ತೀವ್ರ, ದೈಹಿಕ ಅಸ್ವಸ್ಥತೆ ಉಂಟಾಗುವುದು ಈ ಜ್ವರದ ಆರಂಭಿಕ ಲಕ್ಷಣವಾಗಿದೆ. ಇದರ ಜತೆಗೆ ವಾಂತಿ, ಉದರ ನೋವು, ತಲೆನೋವು, ಸ್ನಾಯು ನೋವು, ಜ್ವರವೂ ಅನುಭವಗೊಳ್ಳುತ್ತದೆ. ಇಂತಹ ಲಕ್ಷಣ ಯಾರಲ್ಲಾದರೂ ಕಾಣಿಸಿಕೊಂಡಿದ್ದಲ್ಲಿ ಅವರು ತಕ್ಷಣ ಚಿಕಿತ್ಸೆ ಪಡೆಯಬೇಕೆಂದೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page