ಬದಿಯಡ್ಕ: ಮನೆಯವರು ಸಂಬಂಧಿಕರ ಮನೆಗೆ ಹೋದ ಸಂದರ್ಭದಲ್ಲಿ ಯುವಕ ಬೆಡ್‌ರೂಂನ ಫ್ಯಾನ್‌ಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕನ್ಯಪ್ಪಾಡಿ ಬಳಿಯ ಪಟ್ಟಾಜೆ ನಿವಾಸಿ ಚನಿಯಪ್ಪ ನಾಯ್ಕ ಎಂಬವರ ಪುತ್ರ ರಂಜಿತ್ (29) ಸಾವಿಗೀಡಾದ ವ್ಯಕ್ತಿ. ನಿನ್ನೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8.30ರ ಮಧ್ಯೆಗಿನ ಸಮಯದಲ್ಲಿ ಘಟನೆ ನಡೆದಿದೆ. ಮನೆಯವರು ಬೆಳಿಗ್ಗೆ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ರಂಜಿತ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ ಮನೆಯವರು ಮರಳಿ ತಲುಪಿದಾಗ ಮನೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು. ಬಾಗಿಲು ಬಡಿದು ಕರೆದರೂ ತೆರೆಯದ ಹಿನ್ನೆಲೆಯಲ್ಲಿ ಬಾಗಿಲನ್ನು ಮೆಟ್ಟಿ ಮುರಿದು ಒಳಪ್ರವೇಶಿಸಿ ನೋಡಿದಾಗ ರಂಜಿತ್ ಬೆಡ್‌ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ತಂದೆ, ತಾಯಿ ಶ್ಯಾಮಲ, ಸಹೋದರ ಸುಜಿತ್, ಸಹೋದರಿ ಸುಪ್ರೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ರಂಜಿತ್ ಅಲ್ಯುಮೀನಿ ಯಂ ಫ್ಯಾಬ್ರಿಕೇಶನ್ ಕೆಲಸ ನಿರ್ವಹಿಸುತ್ತಿದ್ದರು. ಇವರು ಆತ್ಮಹತ್ಯೆಗೈಯ್ಯಲು ಕಾರಣ ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.






