ಮಧುರೈಯಲ್ಲಿ ರೈಲಿಗೆ ಬೆಂಕಿ: ೯ ಮಂದಿ ಸಾವು; ೨೦ ಮಂದಿಗೆ ಗಂಭೀರ

ಮಧುರೈ: ತಮಿಳುನಾಡಿನ ಮಧುರೈ ರೈಲ್ವೇ ಜಂಕ್ಷನ್‌ನ ಯಾರ್ಡ್‌ನಲ್ಲಿ ನಿಂತಿದ್ದ ಪ್ರವಾಸಿ ರೈಲಿಗೆ ಬೆಂಕಿ ತಗಲಿ ೯ ಮಂದಿ ಸಾವನ್ನಪ್ಪಿ, ಹಲವರು ಗಂಭೀರ ಸುಟ್ಟು ಗಾಯಗೊಂಡ ದಾರುಣ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಈ ರೈಲು ಉತ್ತರಪ್ರದೇಶದ ಲಿಖಿಂಪುರದ ಖೇರಿಯಿಂದ ಪ್ರವಾಸಿಗರನ್ನು  ಹೊತ್ತೊಯ್ಯುತ್ತಿತ್ತು.  ಘಟನೆ ನಡೆದ ಸ್ಥಳದಲ್ಲೇ ಇಬ್ಬರು ಪ್ರಾಣ ಕಳದುಕೊಂಡರು.  ಚಿಕಿತ್ಸೆಗೆ ಸ್ಪಂದಿಸದೆ ಏಳು ಮಂದಿ  ನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ೨೦ರಷ್ಟು ಮಂದಿ ಗಂಭೀರ ಸುಟ್ಟು ಗಾಯಗೊಂಡಿದ್ದು, ಅವರನ್ನು ರಾಜಾಜಿ ಆಸ್ಪತ್ರೆಯಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.  ಇಂದು ಮುಂಜಾನೆ ಸುಮಾರು ೫ ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಬೆಂಕಿ ಅಪಘಡದಲ್ಲಿ ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. 

ಪ್ರಾಥಮಿಕ ಮಾಹಿತಿ ಪ್ರಕಾರ ರೈಲಿನಲ್ಲಿದ್ದ ಓರ್ವ ಚಹಾ ತಯಾರಿಸಲೆಂದು ರೈಲು ಬೋಗಿಯೊಳಗೆ ಗ್ಯಾಸ್ ಸಿಲಿಂಡರ್ ಉರಿಸಿದಾಗ  ಗ್ಯಾಸ್ ಸೋರಿಕೆಯಾಗಿ  ಸ್ಫೋಟಗೊಂಡಿರುವದೇ ರೈಲಿಗೆ ಬೆಂಕಿ ತಗಲಲು ಕಾರಣವೆನ್ನಲಾಗಿದೆ.

ಈ ಅನಾಹುತ ಉಂಟಾದ ರೈಲು ಲಕ್ನೋ-ರಾಮೇಶರ ಟೂರಿಸ್ಟ್ ರೈಲಾಗಿದೆ. ಈ ರೈಲಿನಲ್ಲಿ   ಮೇ ೧೭ರಂದು  ೧೫ ದಿನಗಳ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಉತ್ತರಪ್ರದೇಶದ ೯೦ ಮಂದಿ ಲಕ್ನೋದಿಂದ ಪ್ರಯಾಣ ಆರಂಭಿಸಿದ್ದರು. ಅಗ್ನಿಶಾಮಕದಳ ಸಿಬ್ಬಂದಿಗಳು, ಆರೋಗ್ಯ ಇಲಾಖೆ, ರೈಲ್ವೇ ಇಲಾಖಯ ಸಿಬ್ಬಂದಿಗಳು ಮತ್ತು ಪೊಲೀಸರು ರಕ್ಷಾ ಕಾರ್ಯಾಚರಣೆ ನಡೆಸಿದರು.

ಈ ರೈಲು ಮಧುರೈಯಿಂದ ತಿರುಪತಿ, ರಾಮೇಶರ, ಕನ್ಯಾಕುಮಾರಿಗೆ ಪ್ರಮಾಣ ಮುಂದುವರಿಸಬೇಕಾಗಿತ್ತು. ಪ್ರಯಾಣಿಕರಿಗೆ ವಿಶ್ರಾಂತಿ ನೀಡಲು ಈ ರೈಲನ್ನು ಮಧುರೈ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಿಲ್ಲಿಸಲಾಗಿತ್ತು. ಆ ವೇಳೆ ಇಂದು ಮುಂಜಾನೆ ಅಪಘಾತ ಸಂಭವಿಸಿದೆ.

RELATED NEWS

You cannot copy contents of this page