ಮಂಜೇಶ್ವರ ಎಸ್.ಐ.ಗೆ ಆಕ್ರಮಿಸಿದ ತಂಡದಲ್ಲಿ ಕೊಲೆ ಪ್ರಕರಣದ ಆರೋಪಿಯೂ ಶಾಮೀಲು; ಪ್ರಥಮ ಆರೋಪಿ ಗಲ್ಫ್‌ಗೆ ಪರಾರಿ

ಮಂಜೇಶ್ವರ: ರಾತ್ರಿ ಗಸ್ತು ನಡೆಸುತ್ತಿದ್ದಾಗ ಮಂಜೇಶ್ವರ ಎಸ್‌ಐ ಪಿ. ಅನೂಪ್‌ರ ಮೇಲೆ ಆಕ್ರಮಿಸಿದ ಪ್ರಕರಣದಲ್ಲಿ ಕೊಲೆ ಪ್ರಕರಣದ ಆರೋಪಿಯೂ ಶಾಮೀಲಾಗಿರುವು ದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.

ವರ್ಷಗಳ ಹಿಂದೆ ಉಪ್ಪಳದ ಕುಖ್ಯಾತ ಗೂಂಡಾ ತಂಡದ ನೇತಾರನಾಗಿದ್ದ ಖಾಲಿಯಾ ರಫೀಕ್‌ನನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ ಈತನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಖಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಸೆರೆಹಿಡಿದು ಬಳಿಕ ರಿಮಾಂಡ್‌ನಲ್ಲಿದ್ದ ಆರೋಪಿ ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡು ಊರಿಗೆ ಮರಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಆದಿತ್ಯವಾರ ಮುಂಜಾನೆ ಎಸ್.ಐ ಅನೂಪ್ ಹಾಗೂ ಸಿವಿಲ್ ಪೊಲೀಸ್ ಆಫೀಸರ್ ಕಿಶೋರ್‌ರ ಮೇಲೆ ಉಪ್ಪಳ ಹಿದಾಯತ್ ನಗರದಲ್ಲಿ ತಂಡವೊಂದು ಆಕ್ರಮಣ ನಡೆಸಿದೆ. ಎಸ್‌ಐಯ ದೂರಿನ ಮೇರೆಗೆ ಐದು ಮಂದಿ ವಿರುದ್ಧ ಪೊಲೀಸರ ಮೇಲೆ ಆಕ್ರಮಣ ಹಾಗೂ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಂತೆ ಕೇಸು ದಾಖಲಿಸಲಾಗಿದೆ.  ಇವರಲ್ಲಿ ಐದನೇ ಆರೋಪಿಯಾದ ಜಿಲ್ಲಾ ಪಂಚಾಯತ್ ಸದಸ್ಯನೂ, ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಜೊತೆ ಕಾರ್ಯದರ್ಶಿಯಾದ ಗೋಲ್ಡನ್ ಅಬ್ದುಲ್ ರಹ್ಮಾನ್‌ರನ್ನು ನಿನ್ನೆ ಬಂಧಿಸಲಾಗಿದೆ. ಇವರಿಗೆ ರಿಮಾಂಡ್ ವಿಧಿಸಲಾಗಿದೆ.  ಇದೇ ವೇಳೆ ಪ್ರಕರಣದ ಒಂದನೇ ಆರೋಪಿ ಯಾದ ಉಪ್ಪಳದ ರಶೀದ್ ಗಲ್ಫ್‌ಗೆ ಪರಾರಿಯಾಗಿರುವು ದಾಗಿ ಸೂಚನೆಯಿದೆ. ಈತನನ್ನು ಮರಳಿ ಊರಿಗೆ ತಲುಪಿಸುವ ಅಂಗವಾಗಿ ಲುಕೌಟ್ ನೋಟೀಸು ಹೊರಡಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ. ಅಫ್ಸಲ್ ಹಾಗೂ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

You cannot copy contents of this page