ಉಪ್ಪಳದಲ್ಲಿ ಎಟಿಎಂ ವಾಹನದಿಂದ 50 ಲಕ್ಷ ರೂ. ಕಳವು ನಡೆಸಿದ ಆರೋಪಿಗಳಲ್ಲೋರ್ವ ಬಂಧನ

ಉಪ್ಪಳ: ಉಪ್ಪಳದಲ್ಲಿ ಎಟಿಎಂ ಗೆ ಹಣ ತುಂಬಿಸಲು ಬಂದ ವಾಹನದಿಂದ ೫೦ ಲಕ್ಷ ರೂಪಾಯಿ ಕಳವು ನಡೆಸಿದ ಪ್ರಕರಣದಲ್ಲಿ ಆರೋಪಿಯನ್ನು ಸೆರೆಹಿಡಿ ಯುವಲ್ಲಿ ಮಂಜೇಶ್ವರ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ರಾಮ್‌ಜಿನಗರ ನಿವಾಸಿ ಮುತ್ತು ಕುಮಾರನ್  ಯಾನೆ ಮುತ್ತು (47) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.

ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಮಂ ಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಟೋಲ್ಸನ್ ಜೋಸೆಫ್ ಒಳಗೊಂಡ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲು  ಸಾಧ್ಯವಾಗಿದೆ. ಆರೋಪಿ ತಿರುಚಿರಾಪಳ್ಳಿಯಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ಪೊಲೀಸರು ತಿರುಚಿರಾಪಳ್ಳಿ ರಾಮ್‌ಜಿ ನಗರದಲ್ಲಿ ಆರೋಪಿ ಮುತ್ತು ಕುಮಾರನ್‌ನನ್ನು ಸೆರೆಹಿಡಿದಿದ್ದಾರೆ.

ಮಾರ್ಚ್ 27ರಂದು ಹಾಡ ಹಗಲೇ ಕಳವು ಘಟನೆ ನಡೆದಿತ್ತು. ಉಪ್ಪಳದ ಆಕ್ಸಿಸ್ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಿಸಲು ಬಂದ ವ್ಯಾನ್‌ನ ಗಾಜು  ಪುಡಿಗೈದು ಹಣ ಕಳವು ನಡೆಸಲಾಗಿತ್ತು. ವ್ಯಾನ್‌ನಲ್ಲಿದ್ದ ಚಾಲಕ ಹಾಗೂ ಇನ್ನೋರ್ವ  ಎಟಿಎಂ ಕೌಂಟರ್‌ಗೆ ತೆರಳಿದ್ದ ಸಂದರ್ಭದಲ್ಲಿ ಅದೇ ಪರಿಸರದಲ್ಲಿ ಹೊಂಚು ಹಾಕಿದ್ದ ಆರೋಪಿ ಮುತ್ತು ಕುಮಾರನ್ ವಾಹನದ ಗಾಜು ಪುಡಿಗೈದು ಅದರಲ್ಲಿದ್ದ 50 ಲಕ್ಷ ರೂಪಾಯಿ ಕಳವು ನಡೆಸಿದ್ದನು. ಕೆಲವೇ ನಿಮಿಷಗಳಲ್ಲಿ ಎಟಿಎಂ ಕೌಂಟರ್ ನಿಂದ ಬಂದವರು ನೋಡಿದಾಗಲೇ ಕಳವು ಅರಿವಿಗೆ ಬಂದಿತ್ತು.  ಈ ಬಗ್ಗೆ ದೂರು ಲಭಿಸಿದ ಮಂಜೇಶ್ವರ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದರು. ಘಟನೆ ಸ್ಥಳದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ವಾಹನ ದಿಂದ ಹಣ ಕಳವು ನಡೆಸಿ ಮೂರು ಮಂದಿ ಪರಾರಿಯಾಗು ತ್ತಿರುವುದು ಕಂಡುಬಂದಿತ್ತು. ತಮಿಳುನಾಡಿನ ತಿರುಟ್ಟು ಗ್ರಾಮ ನಿವಾಸಿಗಳಾದ ಕುಖ್ಯಾತ ಕಳ್ಳರು ಈ ಕಳವು ನಡೆಸಿರುವುದಾಗಿ ಮಾಹಿತಿ ಸಂಗ್ರಹಿಸಿಕೊಂಡ ತನಿಖೆಯನ್ನು ಅತ್ತ ವಿಸ್ತರಿಸಿದ್ದರು. ಆದರೆ ಆರೋಪಿಗಳು ಪೊಲೀಸರ ಕೈಗೆ ಸಿಗದೆ ತಲೆಮರೆಸಿ ಕೊಂಡಿದ್ದರು. ಆರೋಪಿಗಳ ಪೈಕಿ ಇನ್ನೂ ಇಬ್ಬರು ಸೆರೆಗೀಡಾಗಲು ಬಾಕಿಯಿದ್ದಾರೆ. ಇದೀಗ ಸೆರೆಗೀಡಾದ ಆರೋಪಿಯನ್ನು ತನಿಖೆಗೊಳಪಡಿ ಸಿದ್ದಾರೆ. ಇತರ ಇಬ್ಬರು ಆರೋಪಿಗಳ ಕುರಿತಾಗಿ ಮಾಹಿತಿ ಲಭಿಸಬಹ ದೆಂದು ಪೊಲೀಸರು ನಿರೀಕ್ಷಿಸಿದ್ದಾರೆ. ಬಂಧಿತ  ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಆದ್ದರಿಂದ ಆರೋಪಿಯನ್ನು ಹೆಚ್ಚಿನ ತನಿಖೆಗೊಳಪಡಿಸುವ ಉದ್ದೇಶದಿಂದ ಆತನನ್ನು ಕಸ್ಟಡಿಗೆ ತೆಗೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page