ವ್ಯಾಪಾರಿಯನ್ನು ಅಪಹರಿಸಿ ಹಣ ಎಗರಿಸಿದ ಪ್ರಕರಣ ಬದಿಯಡ್ಕ ನಿವಾಸಿ ಸೇರಿದಂತೆ ಇಬ್ಬರ ಬಂಧನ
ಬದಿಯಡ್ಕ: ಬೇಕರಿ ಮಾಲಕ ರನ್ನು ಅಪಹರಿಸಿ ಹಣ ಎಗರಿಸಿದ ಪ್ರಕgಣಕ್ಕೆ ಸಂಬಂಧಿಸಿ ಬದಿಯಡ್ಕ ನಿವಾಸಿ ಸೇರಿ ಇಬ್ಬರನ್ನು ಕಣ್ಣೂರು ಜಿಲ್ಲೆಯ ಚಕ್ಕರಕಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಸಾದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಬದಿಯಡ್ಕದ ಯು.ಎಸ್. ಮುಸಾಮಿಲ್ (24) ಮತ್ತು ಕಣ್ಣೂರು ಪೆರುಂಬಾಯಿಲ್ ಎ. ಅಶ್ರಫ್ (24) ಬಂಧಿತ ಆರೋಪಿಗಳು ಈ ಪಕರಣಕ್ಕೆ ಸಂಬಂಧಿಸಿ ರಾಮಪುರಂ ನಿವಾಸಿ ಎನ್.ಸಿಜೋ (30) ಎಂಬಾತನನ್ನು ಪೊಲೀಸರು ಸೆಪ್ಟಂಬರ್ 28ರಂದು ಬಂಧಿಸಿದ್ದರು. ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿರುವ ಚಕ್ಕರಕ್ಕಲ್ ಎಚ್ಚೂರು ಕಮಾಲ್ ಪೀಡಿಗದ ತವಕ್ಕಲ್ ಹೌಸ್ನಪಿ.ವಿ. ರಫೀಕ್ (45) ಎಂಬವರನ್ನು ಕಳೆದ ತಿಂಗಳ ೫ರಂದು ಐದು ಮಂದಿಯ ತಂಡ ಕಾರಿನಲ್ಲಿ ಅಪಹರಿಸಿ 9 ಲಕ್ಷ ರೂ. ಎಗರಿಸಿದ ದೂರಿನಂತೆ ಚಕ್ಕರಕ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಪಹರಿಸಲು ಬಳಸಿದ ಕಾರನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ರಫೀಕ್ ಸೆಪ್ಟಂಬರ್ ೫ರಂದು ಬೆಳಿಗ್ಗೆ ಟೂರಿಸ್ಟ್ ಬಸ್ನಲ್ಲಿ ಬೆಂಗಳೂರಿನಿಂದ ಚಕ್ಕರಕ್ಕಲ್ ಕಮಾಲ್ಪಿಡಿಯಲ್ಲಿ ಬಂದಿಳಿದು ಮನೆಗೆ ಹೋಗುವ ದಾರಿ ಮಧ್ಯೆ ಕಾರಿನಲ್ಲಿ ಬಂದ ಅಕ್ರಮಿಗಳ ತಂಡ ಅವರನ್ನು ಅಪಹರಿಸಿ ಹಣ ಮತ್ತು ಮೊಬೈಲ್ ಫೋನ್ ಎಗರಿಸಿ ಹಲ್ಲೆ ನಡೆಸಿದ ಬಳಿಕ ಕಾಪಾಟ್ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಕಾರಿನಿಂದ ಹೊರಗೆ ದೂಡಿ ಹಾಕಿ ಪರಾರಿಯಾಗಿ ದ್ದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.