ಕಾಸರಗೋಡು: ನಗರದ ಆಟೋ ಚಾಲಕ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಮಾನವ ಹಕ್ಕು ಆಯೋಗ ಸ್ವಯಂ ಕೇಸು ದಾಖಲಿಸಿಕೊಂಡಿದೆ. ಜಿಲ್ಲಾ ಪೊಲೀಸ್ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕೆಂದು ಮಾನವ ಹಕ್ಕು ಆಯೋಗ ತಿಳಿಸಿದೆ.
ಕಸ್ಟಡಿಗೆ ತೆಗೆದುಕೊಂಡ ಆಟೋ ರಿಕ್ಷಾವನ್ನು ಪೊಲೀಸರು ಮರಳಿ ನೀಡದಿರುವುದರಿಂದ ಮನನೊಂದು ಕಾಸರಗೋಡು ರೈಲು ನಿಲ್ದಾಣ ರಸ್ತೆ ಬಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಕೆ. ಅಬ್ದುಲ್ ಸತ್ತಾರ್ ಈ ತಿಂಗಳ 7ರಂದು ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಸ್ಟಡಿಗೆ ತೆಗೆದುಕೊಂಡ ಆಟೋ ರಿಕ್ಷಾವನ್ನು ಮರಳಿ ನೀಡದಿರುವುದರಿಂದ ಮನನೊಂದು ಅಬ್ದುಲ್ ಸತ್ತಾರ್ ಆತ್ಮಹತ್ಯೆಗೈದಿರುವು ದಾಗಿ ಆರೋಪಿಸಿ ಆಟೋ ಚಾಲಕರು ಕಾಸರಗೋಡು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಆತ್ಮಹತ್ಯೆಗೈಯ್ಯುವ ಮೊದಲು ಪೊಲೀಸರಿಂದ ಎದುರಿ ಸಬೇಕಾಗಿ ಬಂದ ಸಮಸ್ಯೆಗಳನ್ನು ವಿವರಿಸಿ ಅಬ್ದುಲ್ ಸತ್ತಾರ್ ಫೇಸ್‌ಬುಕ್‌ನಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಪೊಲೀಸರು ತನ್ನ ಬೇಡಿಕೆಯನ್ನು ಅವಗಣಿಸಿದುದರಿಂದ ಭಾರೀ ದುಃಖ ಅನುಭವಿಸಬೇಕಾಗಿ ಬಂದಿದೆಯೆಂದು ಅವರು ವೀಡಿಯೋದಲ್ಲಿ ತಿಳಿಸಿದ್ದರು. ಈ ಘಟನೆ ವಿವಾದವಾಗುವುದ ರೊಂದಿಗೆ ಎಸ್‌ಐ ಅನೂಬ್‌ರನ್ನು ಇಲ್ಲಿಂದ ವರ್ಗಾಯಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ನಿರ್ದೇಶ ಪ್ರಕಾರ ಜಿಲ್ಲಾ ಕ್ರೈಂ ಬ್ರಾಂಚ್‌ಗೆ ಪ್ರಕರಣದ ತನಿಖೆಯನ್ನು ವಹಿಸಿಕೊಡಲಾಗಿದೆ.