ಮಂಜೇಶ್ವರ: ತಲಪಾಡಿ ಟೋಲ್ ಗೇಟ್ ಅಧಿಕಾರಿಗಳ ತಾರತಮ್ಯ ನೀತಿ ಹಾಗೂ ಸಿಬ್ಬಂದಿಗಳ ಗೂಂಡಾಗಿರಿ ವಿರುದ್ಧ ಮಂಜೇಶ್ವರ ಟೋಲ್ ಗೇಟ್ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಿನ್ನೆ ಸಂಜೆ ತಲಪಾಡಿ ಟೋಲ್ ಗೇಟ್ ಪರಿಸರದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ತಲಪಾಡಿ ಟೋಲ್ ಗೇಟ್ ಸ್ಥಾಪಿಸಿದ ಆರಂಭದಲ್ಲಿ ಕೇರಳ ಕರ್ನಾಟಕದ ಸ್ಥಳೀಯ ಐದು ಕಿಲೋ ಮೀಟರ್ ಸುತ್ತಳತೆಯಲ್ಲಿರುವ ನಿವಾಸಿಗಳಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಲಾಗುತಿತ್ತು. ಆದರೆ ಕ್ರಮೇಣ ಇದು ಕೇವಲ ಕರ್ನಾಟಕ ನಿವಾಸಿಗಳಿಗೆ ಮಾತ್ರ ಸೀಮಿತಗೆೆÆಳಿಸಿ ಕೇರಳದವರಿಗೆ ವಿನಾಯಿತಿ ರದ್ದು ಪಡಿಸಿ ಟೋಲ್ ಸಂಗ್ರಹ ಮಾಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಕ್ರಿಯಾ ಸಮಿತಿ ಊರವರನ್ನು ಒಟ್ಟು ಸೇರಿಸಿ ಪ್ರತಿಭಟನೆಗೆ ನೇತೃತ್ವ ನೀಡಿದೆ. ಜಾತಿ ಮತ ಭೇಧ ರಾಜಕೀಯ ಮರೆತು ಗಡಿನಾಡ ಜನತೆ ಒಗ್ಗಟ್ಟಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ತಲಪಾಡಿ ಮರಿಯಾಶ್ರಮ ಚರ್ಚ್ನ ಉಪಾಧ್ಯಕ್ಷೆ ಲೀನಾ ಡಿ ಕೋಸ್ಟ ಪ್ರತಿಭಟನೆಗೆ ಚಾಲನೆ ನೀಡಿದರು. ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅಧ್ಯಕ್ಷತೆ ವಹಿಸಿದರು. ನೇತಾರರಾದ ಮುನೀರ್ ಕಾಟಿಪಳ್ಳ, ಬಿ.ವಿ. ರಮೇಶ, ಡಿಎಂಕೆ ಮೊಹಮ್ಮದ್, ಸೈಪುಲ್ಲ ತಂಙಲ್, ಶೆರೀಪ್ ಪಾವೂರು, ಸಿದ್ದಿಖ್ ತಲಪಾಡಿ, ಎಸ್ ಎಂ ಬಶೀರ್ ,ಅಬ್ದುಲ್ ಸಲಾಂ ಉಚ್ಚಿಲ್, ಅಶ್ರಫ ಬಡಾಜೆ, ಹಿದಾಯತುಲ್ಲ, ರಹೀಮ್ ಉಚ್ಚಿಲ್ ,ಮಹಮ್ಮದಲಿ ಗುಡ್ಡೆ, ಬಶೀರ್ ಕನಿಲ ಮಾತನಾಡಿದರು. ಜಬ್ಬಾರ್ ಬಹರೈನ್, ಝಕರಿಯ, ಮುಸ್ತಫ, ಆಲಿ ಕುಟ್ಟಿ ನೇತೃತ್ವ ನೀಡಿದರು.
ಟೋಲ್ ಗೇಟ್ ಕ್ರಿಯಾ ಸಮಿತಿ ಪದಾಧಿಕಾರಿಗಳು,ಕಾರ್ಯಕರ್ತರು ಜನಪ್ರತಿನಿಧಿಗಳು ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳ ನೇತಾರರು ವಿವಿಧ ಕ್ಲಬ್ ಗಳ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು. ಕ್ರಿಯಾ ಸಮಿತಿ ಕನ್ವೀನರ್ ಅಬ್ದುಲ್ ರಹೀಂ ಸ್ವಾಗತಿಸಿ, ಹಸೈನಾರ್ ವಂದಿಸಿದರು.
