ಮಂಜೇಶ್ವರ: ಗುಡ್ಡೆ ಪ್ರದೇಶದಲ್ಲಿ ಉಂಟಾದ ಅಗ್ನಿದುರಂತದಿಂದ ಪರಿಸರದ ಮನೆಗಳಿಗೆ ಸಂಭವಿಸಬಹುದಾದ ಅಪಾಯವನ್ನು ಉಪ್ಪಳ ಅಗ್ನಿಶಾಮಕ ದಳ ತಪ್ಪಿಸಿದೆ. ನಿನ್ನೆ ಮಧ್ಯಾಹ್ನ ವರ್ಕಾಡಿ ಪಂ. ವ್ಯಾಪ್ತಿಯ ಬಾಕ್ರಬೈಲು ಎಂಬಲ್ಲಿ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯಕ್ಕೆ ತಗಲಿದ ಬೆಂಕಿ ಪರಿಸರದ ಗುಡ್ಡೆ ಪ್ರದೇಶದಲ್ಲಿರುವ ಹುಲ್ಲು, ಕಾಡು ಪೊದೆಗಳಿಗೆ ಹರಡಿದೆ. ಈ ಬೆಂಕಿ ಸಮೀಪದಲ್ಲಿರುವ ಮನೆಗಳಿಗೆ ಅಪಾಯ ತಂದೊಡ್ಡಬಹುದಾಗಿದ್ದು, ಉಪ್ಪಳ ಅಗ್ನಿಶಾಮಕ ದಳ ಸುಮಾರು ಮೂರು ತಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಂದಿಸಿದ್ದಾರೆ. ಮದುವೆ ಸಮಾರಂಭಗಳಲ್ಲಿ ಸಿಬ್ಬಂದಿಗಳು ಉಪಯೋಗಿಸಿದ ಪ್ಲೇಟ್ ಸಹಿತ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಉಪೇಕ್ಷಿಸಿ ಅದನ್ನು ಉರಿಸಿರುವುದೇ ಬೆಂಕಿ ಅನಾಹುತ ಸಂಭವಿಸಲು ಕಾರಣವೆನ್ನಲಾಗಿದೆ.
