ಪ.ಜಾತಿಗೆ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ: ಮತ್ತೆ ಏಳು ಮಂದಿ ಸೆರೆ; ಆಸ್ಪತ್ರೆಯಲ್ಲ್ಲೂ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ಬಾಲಕಿಯ ಹೊಸ ಹೇಳಿಕೆ
ಪತ್ತನಂತಿಟ್ಟ: ಪತ್ತನಂತಿಟ್ಟ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಈತನಕ ಸೆರೆಗೊಳಗಾದ ಆರೋಪಿಗಳ ಸಂಖ್ಯೆ ಈಗ ೨೭ಕ್ಕೇರಿದೆ. ೬೪ಕ್ಕೂ ಹೆಚ್ಚು ಮಂದಿ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ.
ಇದರಹೊರತಾಗಿ ಪತ್ತನಂತಿಟ್ಟ ಜನರಲ್ ಆಸ್ಪತ್ರೆಯಲ್ಲಿ ನಾಲ್ವರು ಸೇರಿ ತನ್ನ ಮೇಲೆ ಸಾಮೂಹಿಕವಾಗಿ ಆತ್ಯಾಚಾರವೆಸಗಿರುವುದಾಗಿ ಈ ಬಾಲಕಿ ಪೊಲೀಸರಲ್ಲಿ ಹೊಸ ಹೇಳಿಕೆ ನೀಡಿದ್ದಾಳೆ. ಕಳೆದ ವರ್ಷ ಜನವರಿ ಯಲ್ಲಿ ತನಗೆ ಈ ರೀತಿ ಲೈಂಗಿಕ ಕಿರುಕುಳ ನೀಡಲಾಗಿದೆ. ಪತ್ತನಂತಿಟ್ಟ ಖಾಸಗಿ ಬಸ್ ನಿಲ್ದಾಣದಿಂದ ನಾಲ್ವರ ತಂಡ ತನ್ನನ್ನು ಕಾರಿಗೇರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ತನನ್ನು ಮನೆ ಬಳಿ ತಂದು ಇಳಿಸಿ ಹೋದರೆಂದು ಬಾಲಕಿ ಹೇಳಿಕೆಯಲ್ಲಿ ಆರೋ ಪಿಸಿದ್ದಾಳೆ.
ಇನ್‌ಸ್ಟಾಗ್ರಾಂ ಮೂಲಕ ಪರಿಚಯಗೊಂಡ ದೀಪು ಎಂಬಾತ ಹಾಗೂ ಆತನ ಸ್ನೇಹಿತರು ಸೇರಿ ತನ್ನನ್ನು ರಾನ್ನಿಯ ತೋಟವೊಂದಕ್ಕೆ ಕರೆದೊಯ್ದು ಅಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರುವುದಾಗಿ ಬಾಲಕಿ ಹೇಳಿಕೆ ನೀಡಿದ್ದು, ಅದರಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಹಲವರು ಈಗ ವಿದೇಶದಲ್ಲಿದ್ದು, ಅವರನ್ನು ಊರಿಗೆ ಕರೆತಂದು ಬಂಧಿಸುವ ಕ್ರಮವನ್ನು ಆರಂಭಿಸಲಾಗಿದೆ.
13 ವರ್ಷ ಪ್ರಾಯದ ವೇಳೆಯಲ್ಲೇ (2019) ಈ ಬಾಲಕಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಳು. ನಂತರ ಐದು ವರ್ಷಗಳ ತನಕ ತನಗೆ ಹಲವರು ಹಲವೆಡೆಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಬಾಲಕಿ ಪೊಲೀಸರಿಗೆ ಹಾಗೂ ಶಿಶು ಕಲ್ಯಾಣ ಸಮಿತಿಗೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದಾಳೆ. ಬಾಲಕಿಗೆ ಈಗ 18 ವರ್ಷ ಪ್ರಾಯವಾಗಿದೆ.
ಈ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಪತ್ತನಂತಿಟ್ಟ ಎಸ್‌ಪಿ ವಿ.ಜಿ. ವಿನೋದ್ ಕುಮಾರ್ ನೇತೃತ್ವದ ವಿಶೇಷ ತಂಡಕ್ಕೆ ಹಸ್ತಾಂತರಿಸಲಾಗಿದೆ. ಡಿವೈಎಸ್ಪಿ ಎಸ್. ನಂದಕುಮಾರ್ ಸೇರಿದಂತೆ ಹಲವು ಪೊಲೀಸರು ಅಧಿಕಾರಿಗಳನ್ನು ಈ ತಂಡದಲ್ಲಿ ಒಳಪಡಿಸಲಾಗಿದೆ.