ಬದಿಯಡ್ಕ: ಮನುಷ್ಯರ ಮರಣ ಬಳಿಕ ನಡೆಸುವ ಅಂತ್ಯ ಕಾರ್ಯಗಳಿಗೂ ಪುದುಕೋಳಿ ನಿವಾಸಿಗಳು ಹೋರಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ದಶಕಗಳಿಂದ ಕಾರ್ಯಾಚರಿಸುತ್ತಿರುವ ಹಿಂದೂ ರುದ್ರಭೂಮಿಯನ್ನು ಕಬಳಿಸುವ ಯತ್ನ ಆರಂಭಗೊಂಡಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬದಿಯಡ್ಕ ಪಂ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿ ರುದ್ರಭೂಮಿ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಬದಿಯಡ್ಕ ಪಂ. ವ್ಯಾಪ್ತಿಯ ಮಾನ್ಯ, ನೀರ್ಚಾಲು, ಪೆರಡಾಲ, ಕಾರ್ಮಾರು, ಬೇಳ, ಕನ್ನೆಪ್ಪಾಡಿ, ತಲ್ಪಣಾಜೆ, ಎರಟ್ಟಿಕಾಯಿರ ಮೊದಲಾದ ಪ್ರದೇಶಗಳಲ್ಲಿ ಮರಣ ಸಂಭವಿಸಿದರೆ ಪುದುಕೋಳಿ ಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ನಾಲ್ಕು ಎಕ್ರೆ ವಿಸ್ತೀರ್ಣ ಹೊಂದಿದ್ದ ಈ ರುದ್ರಭೂಮಿ ಪ್ರಸ್ತುತ ಮೂರು ಎಕ್ರೆಗೆ ಸೀಮಿತವಾಗಿದೆ. ಒಂದು ಎಕ್ರೆ ಸ್ಥಳವನ್ನು ಪಂಚಾಯತ್ ಅಧಿಕಾರಿಗಳು ಇತರ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಈ ಮಧ್ಯೆ ಕಳೆದ ಕೆಲವು ಸಮಯಗಳಿಂದ ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರು ಮನೆಗಳಿಂದ ಸಂಗ್ರಹಿಸುವ ಕಸಕಡ್ಡಿಗಳನ್ನು ರುದ್ರಭೂಮಿಯಲ್ಲಿ ತಂದು ಉಪೇಕ್ಷಿಸುತ್ತಿರುವುದು ಕಂಡು ಬಂದಿತ್ತು. ಸ್ಥಳೀಯರ ದೂರಿನ ಮೇರೆಗೆ ಈ ಕಸ ಕಡ್ಡಿಗಳನ್ನು ರುದ್ರಭೂಮಿಯೊಳಗಿನ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. ಪ್ರಸ್ತುತ ಇಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಜೆಸಿಬಿ ಬಳಸಿ ನಾಂದಿ ಹಾಡಲಾಗಿದ್ದು ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತಂತ್ರಜ್ಞಾನಗಳು ಎಷ್ಟೇ ವಿಸ್ತರಿಸಿದ್ದರೂ ರುದ್ರಭೂಮಿ ನಿರ್ವಹಣೆಗೆ ಇದ್ಯಾವುದೂ ಉಪಯೋಗಪ್ರದವಾಗ ದಿರುವುದು ಜಿಲ್ಲೆಯ ಬಹುತೇಕ ಪಂಚಾಯತ್‌ಗಳಲ್ಲಿ ಕಂಡು ಬರುತ್ತಿದೆ. ಅವೈಜ್ಞಾನಿಕ ರೀತಿಗಳಲ್ಲಿ ಮೃತದೇಹವನ್ನು ದಹಿಸುವ ಕ್ರಮಗಳಿಂದ ರುದ್ರಭೂಮಿ ಬಳಕೆಗೆ ಸ್ಥಳೀಯರ ಪ್ರತಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ರುದ್ರಭೂಮಿ ಗಾಗಿ ಇರಿಸಿದ ಸ್ಥಳಗಳನ್ನು ಕೂಡಾ ಪಂಚಾಯತ್ ಕಬಳಿಸುತ್ತಿರುವುದು ಕಂಡು ಬರುತ್ತಿದೆ. ಪುದುಕೋಳಿ ಹಿಂದೂ ರುದ್ರಭೂಮಿ ಸಂರಕ್ಷಣೆಗಾಗಿ ಬ್ಲೋಕ್ ಪಂ. ಸದಸ್ಯೆ ಅಶ್ವಿನಿ ಮೊಳೆಯಾರ, ಪಂ. ಸದಸ್ಯೆ ಸ್ವಪ್ನ ಜೆ. ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪಂಚಾಯತ್ ಅಧ್ಯಕ್ಷೆ ಶಾಂತಾ ಬಾರಡ್ಕ, ಉಪಾಧ್ಯಕ್ಷ ಅಬ್ಬಾಸ್ ಎಂ, ಜೊತೆ ಕಾರ್ಯದರ್ಶಿ ಸಜಿತ್ ಸ್ಥಳಕ್ಕೆ ತಲುಪಿ ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಪ್ರಸ್ತುತ ನಿರ್ವಹಿಸುತ್ತಿರುವ ಕಾಮಗಾರಿಯನ್ನು ನಿಲುಗಡೆಗೊಳಿಸಿ, ರುದ್ರಭೂಮಿಯ ಭೂ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಗೆ ಸದಾಶಿವ ಮಾಸ್ತರ್, ಮಧುಚಂದ್ರ ಮಾನ್ಯ, ಮಂಜುನಾಥ ಪುದುಕೋಳಿ, ಕಿರಣ್ ನೀರ್ಚಾಲು, ಸತೀಶ್ ಏಣಿಯರ್ಪು, ರವಿಚಂದ್ರ ಮಲ್ಲಡ್ಕ, ಅಜಿತ್ ನೀರ್ಚಾಲು, ಎಸ್.ಕೆ. ಗೋಪಾಲಕೃಷ್ಣ ಭಟ್ ನೀರ್ಚಾಲು, ನಾಗರಾಜ ಮಲ್ಲಡ್ಕ, ಸತ್ಯ ನೀರ್ಚಾಲು, ಮಣಿಕಂಠ ವೀರನಗರ, ಪುನೀತ್ ಏಣಿಯರ್ಪು, ಮೋಹನ ಏಣಿಯರ್ಪು, ಮಂಜುನಾಥ ಚುಕ್ಕಿನಡ್ಕ, ಬಾಲಕೃಷ್ಣ ಮಲ್ಲಡ್ಕ, ಹರಿಪ್ರಸಾದ್ ರತ್ನಗಿರಿ, ಅರವಿಂದ ಭಟ್ ನೀರ್ಚಾಲು, ವಿಷ್ಣು ಶರ್ಮ ಮಲ್ಲಡ್ಕ ನೇತೃತ್ವ ನೀಡಿದರು.