ದೆಹಲಿ: ಸಿನಿಮಾದಲ್ಲೇ ಕಂಡು ಬಾರದಂತಹ ಅತಿ ಸಾಹಸಿಕವಾದ ಹಾಗೂ ಜೀವಾಪಾಯವಿಲ್ಲದೆ ಪಾರಾದ ಘಟನೆ ಬಗ್ಗೆ ದೆಹಲಿಯಿಂದ ವರದಿಯಾಗಿದೆ. 13ರ ಹರೆಯದ ಬಾಲಕನ ಈ ಸಾಹಸದ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ.
ಕಾಬೂಲ್‌ನಿಂದ ಹಾರಾಟ ಆರಂಭಿಸಿದ ವಿಮಾನದ ಲ್ಯಾಂಡಿಂಗ್ ಗೇರ್ ಕಂಪಾರ್ಟ್‌ಮೆಂಟ್‌ನಲ್ಲಿ ಸೇರಿಕೊಂಡ ಅಫ್ಘಾನ್ ಬಾಲಕ ಭಾರತಕ್ಕೆ ತಲುಪಿದ್ದಾನೆ. ಅಫ್ಘಾನ್ ಏರ್‌ಲೈನ್ಸ್ ವಿಮಾನದಲ್ಲಿ ಈ ಬಾಲಕ ಎರಡು ಗಂಟೆಗಳ ಕಾಲದ ಸಾಹಸಿಕ ಪ್ರಯಾಣ ನಡೆಸಿದ್ದಾನೆ. ವಿಮಾನದ ಲ್ಯಾಂಡಿಂಗ್ ಕಂಪಾರ್ಟ್‌ಮೆಂಟ್‌ನಲ್ಲಿ ಬಾಲಕ ಅಡಗಿ ಕುಳಿತಿದ್ದನು. 2 ಗಂಟೆ ಆಕಾಶದಲ್ಲಿ ಹಾರಿ ಬಂದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿಳಿದಾಗ ಬಾಲಕನ ಸಾಹಸದ ಬಗ್ಗೆ ತಿಳಿದು ಬಂದಿದೆ. ಬಾಲಕ ಸುರಕ್ಷಿತವಾಗಿದ್ದಾನೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಬಳಿಕ ಬಾಲಕನನ್ನು ಇದೇ ವಿಮಾನದಲ್ಲಿ ಅಫ್ಘಾನ್‌ಗೆ ವಾಪಸು ಕಳುಹಿಸಲಾಗಿದೆ. 30,000 ಅಡಿ ಎತ್ತರದಲ್ಲಿ ಹಾರಿದ ವಿಮಾನದಲ್ಲಿ ಬಾಲಕ ಹೇಗೆ ಅಪಾಯವಿಲ್ಲದೆ ಬದುಕಿ ಉಳಿದ ಎಂಬುದು ಈಗ ತಜ್ಞರಿಗೆ ಚಿಂತೆಗೆ ಕಾರಣವಾಗಿದೆ.