ಬದಿಯಡ್ಕ: ಹಿರಿಯ ಕಾಂಗ್ರೆಸ್ ನೇತಾರ, ಬದಿಯಡ್ಕ ಪಂಚಾಯತ್ ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚೆನ್ನೆಗುಳಿ ನಿವಾಸಿ ಐತ್ತಪ್ಪ (76) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಚಿಕಿತ್ಸೆಯಲ್ಲಿದ್ದರು. ಇತ್ತೀಚೆಗೆ ಅಸೌಖ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ವಿವಿಧ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಸೇವೆಯಿಂದ ನಿವೃತ್ತಿಗೊಂಡ ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡು ಜಿಲ್ಲಾ ದಲಿತ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ, ಬದಿಯಡ್ಕ ಮಂಡಲ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷರಾಗಿಯೂ ಇವರು ಕಾರ್ಯಾಚರಿಸಿದ್ದರು.
ಮೃತರು ಮಕ್ಕಳಾದ ಶೀಲ, ರಶ್ಮಿ, ಆಶಾಲತಾ, ಶಿಲ್ಪ, ಅಳಿಯ-ಸೊಸೆಯಂದಿರಾದ ಜನಾರ್ದನ, ಮಧು, ಶೈಜು, ವಿಜಯ್, ಸಹೋದರಿಯರಾದ ಚೋಮಾರು, ಸುಶೀಲ ಹಾಗೂ ಅಪಾರ ಬಂಧು-ಮಿತ್ರ ರನ್ನು ಅಗಲಿದ್ದಾರೆ. ಐತ್ತಪ್ಪರ ಪತ್ನಿ ಸುಂದರಿ, ಇನ್ನೋರ್ವ ಪುತ್ರ ಅಭಿಲಾಷ್, ಸಹೋದರ ಚೋಮ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಬದಿಯಡ್ಕ ಪಂ. ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘ ನೌಕರರು ಹಾಗೂ ಆಡಳಿತ ಸಮಿತಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.