ಕಾಸರಗೋಡು: 2018ರಲ್ಲಿ ಯುವತಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಲಾಯಿತೆಂಬ ಪ್ರಕರಣದಲ್ಲಿ ತನಿಖೆಯ ಅಂಗವಾಗಿ ನಡೆಸಿದ ಡಿಎನ್‌ಎ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಹೇಳಿಕೆ ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ಇನ್ನೋರ್ವ ಯುವಕನ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ.
2018ರಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಅವಿವಾಹಿತಳಾದ ಓರ್ವ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಅಂದು ಯುವತಿ ನೀಡಿದ ದೂರಿನ ಪ್ರಕಾರ ಓರ್ವ ಯುವಕನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಯುವತಿ ಗರ್ಭಿಣಿಯಾಗಿರುವುದು ಅದೇ ಯುವಕನಿಂದಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಪೊಲೀಸರು ಅಂದು ಯುವಕ ಹಾಗೂ ಯುವತಿ ಜನ್ಮ ನೀಡಿದ ಮಗುವಿನ ರಕ್ತ ಸ್ಯಾಂಪಲ್‌ನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು.
ಪ್ರಸ್ತುತ ತಪಾಸಣಾ ಫಲಿತಾಂಶ ಇತ್ತೀಚೆಗೆ ಲಭಿಸಿದೆ. ಡಿಎನ್‌ಎ ತಪಾಸಣೆಯ ಫಲಿತಾಂಶ ಆರೋಪಿಯಾದ ಯುವಕನ ಪರವಾಗಿದೆ. ಇದರಿಂದ ದೂರುದಾತೆಯಾದ ಯುವತಿಯಿಂದ ಪೊಲೀಸರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕನ್ಯಾನ ನಿವಾಸಿಯಾದ ಇನ್ನೋರ್ವ ಯುವಕ ಕೂಡಾ ಕಿರುಕುಳ ನೀಡಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಯುವಕನನ್ನು ಆರೋಪಿಯಾಗಿಸಿ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಮಗುವಿನ ಪಿತೃತ್ವ ಸಾಬೀತುಪಡಿಸಲು ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.