ಪಂದಳಂ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇನ್ನೋರ್ವನನ್ನು ಬಂಧಿಸಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಈಗ ಮೂರಕ್ಕೇರಿದೆ.
ಶಬರಿಮಲೆ ಕ್ಷೇತ್ರದ ಈ ಹಿಂದಿನ ಎಕ್ಸಿಕ್ಯೂಟಿವ್ ಆಫೀಸರ್ ಡಿ. ಸುಧೀಶ್ ಕುಮಾರ್ ಬಂಧಿತ ಆರೋಪಿ. ತನಿಖಾ ತಂಡ ಈತನನ್ನು ನಿನ್ನೆ ಕಸ್ಟಡಿಗೆ ತೆಗೆದು ತಿರುವನಂತಪುರ ಕ್ರೈಂ ಬ್ರಾಂಚ್ ಕಚೇರಿಗೆ ಸಾಗಿಸಿ ಆತನನ್ನು ಸತತ ಮೂರು ತಾಸುಗಳ ತನಕ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡ ನಂತರ ಆತನನ್ನು ಬಂಧಿಸಿದೆ.
ಬಂಧಿತನನ್ನು ಇಂದು ರಾನ್ನಿ ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗುವುದೆಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ಶಬರಿಮಲೆ ದೇಗುಲದ ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚನಗಳು ತಾಮ್ರದ್ದಾಗಿದೆ ಎಂದು ಹೇಳಿ ಅದನ್ನು ಕಳವುಗೈಯ್ಯಲು ಈ ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಗೆ ಅಗತ್ಯದ ಅವಕಾಶ ಒದಗಿಸಿಕೊಟ್ಟಿದ್ದು ಸುಧೀಶ್ ಆಗಿದ್ದಾನೆ ಎಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ತನಿಖಾಧಿ ಕಾರಿಗಳು ತಿಳಿಸಿದ್ದಾರೆ.
ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚಗಳು ಕೇವಲ ತಾಮ್ರದ್ದಾಗಿದೆಯೆಂದು ಸಂಬಂಧಪಟ್ಟ ದಾಖಲುಪತ್ರಗಳಲ್ಲಿ ೨೦೧೯ರಲ್ಲಿ ದಾಖಲಿಸಲಾಗಿತ್ತು.ಅಂದು ಸುಧೀಶ್ ಶಬರಿಮಲೆ ಕ್ಷೇತ್ರದ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದನೆಂದು ಈ ಪ್ರಕರಣದ ಎರಡನೇ ಆರೋಪಿಯಾಗಿರುವ ನಿವೃತ್ತ ಅಡ್ಮಿನಿಸ್ಟ್ರೇಟೀವ್ ಆಫೀಸರ್ ಮುರಾರಿಬಾಬು ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದನು. ಅದರಂತೆ ಸುಧೀಶ್ ಕುಮಾರ್‌ನನ್ನು ತನಿಖಾ ತಂಡ ಬಂಧಿಸಿದೆ.






