ದೆಹಲಿ ಸ್ಫೋಟ: ಇನ್ನೋರ್ವ ವೈದ್ಯ ಸೆರೆ: ಕಾರಿನಲ್ಲಿ ಮೃತಪಟ್ಟದ್ದು ಉಗ್ರ ಡಾ| ಉಮ್ಮರ್ ಮೊಹಮ್ಮದ್ 

ನವದೆಹಲಿ: ನವದೆಹಲಿಯ ಕೆಂಪುಕೋಟೆಯಲ್ಲಿ ನ.೧೦ರಂದು ನಡೆದ ನಿಗೂಢ ಸ್ಫೋಟದ ಬಗ್ಗೆ ಇತರ ಹಲವು ವಿಚಾರಗಳು ಬಹಿರಂಗಗೊಂ ಡಿದೆ. ಕೆಂಪುಕೋಟೆ ಬಳಿ ಸ್ಫೋಟ ಗೊಂಡ ಕಾರನ್ನು ಚಲಾಯಿಸಿದ ವ್ಯಕ್ತಿ ಉಗ್ರ ಡಾ| ಉಮ್ಮರ್ ಮೊಹಮ್ಮದ್ ಆಗಿರುವುದಾಗಿ ಡಿಎನ್‌ಎ ಪರೀಕ್ಷೆಗಳು ದೃಢಪಡಿಸಿದೆ.

ಕಾಶ್ಮೀರ  ಪುಲ್ವಾಮದ ಸಂಬೂರ ಗ್ರಾಮದ ನಿವಾಸಿಗಳಾದ ಉಮ್ಮರ್ ಮೊಹಮ್ಮದ್‌ನ ತಾಯಿ ಮತ್ತು ಸಹೋದರರ ಡಿಎನ್‌ಎ ಮಾದರಿಗಳು ಮತ್ತು  ದಿಲ್ಲಿಯಲ್ಲಿ ಸ್ಫೋಟಗೊಂಡ ಕಾರಿನಲ್ಲಿ ಕಂಡು ಬಂದ ದೇಹದ ಅವಶೇಷಗಳೊಂದಿಗೆ ಹೋಲಿಸಿದಾಗ ಅವು ಶೇ.೧೦೦ರಷ್ಟು ಹೋಲಿಕೆಯಾಗುತ್ತಿದೆ. ಆದ್ದರಿಂದ ಕಾರಿನಲ್ಲಿ ಮೃತಪಟ್ಟ ವ್ಯಕ್ತಿ ಡಾ| ಉಮ್ಮರ್ ಮೊಹಮ್ಮದ್ ಆಗಿರು ವುದಾಗಿ ದೃಢಗೊಂಡಿದೆಯೆಂದು ತನಿಖಾ ತಂಡ ತಿಳಿಸಿದೆ.  ಕಾರಿನಲ್ಲಿ ಬಂದ ಡಾ| ಉಮ್ಮರ್ ಕಾರಿನಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದನೆಂದು   ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಮಾತ್ರವಲ್ಲ ಈ ಪ್ರಕರಣದ ಬಗ್ಗೆ ಎನ್‌ಐಎ  ವಿಸ್ತೃತ ಬಹುರಾಜ್ಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು   ಆರಂಭಿಸಿದೆ.  ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆಧುನಿಕ ವೈಟ್ ಕಾಲರ್ ಭಯೋತ್ಪಾದಕ ಮೋಡ್ಯೂಲ್‌ಗಳನ್ನು ಪ್ರಧಾನವಾಗಿ ಕೇಂದ್ರೀಕರಿಸಿ ಎನ್‌ಐಎ ತನಿಖೆ ಮುಂದುವರಿಸುತ್ತಿದೆ. ಸ್ಫೋಟಗೊಂಡ ಕಾರಿನಲ್ಲಿದ್ದ ಡಾ| ಉಮ್ಮರ್ ಹಾಗೂ  ಸ್ಫೋಟದಲ್ಲಿ ಭಾಗಿಯಾದ ಇತರ ಉಗ್ರರು ಟರ್ಕಿ ದೇಶದ ಉಗ್ರ ಯುಶಾಕ ಎಂಬಾತನೊಂದಿಗೆ ನಂಟು ಹೊಂದಿರುವ   ಮಾಹಿತಿಯೂ ಎನ್‌ಐಎಗೆ ಲಭಿಸಿದೆ. ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ವೈದ್ಯನನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ. ಕಾಶ್ಮೀರದ ಅನಂತನಾಗ್ ನಿವಾಸಿ ಡಾ| ಮೊಹಮ್ಮದ್ ಆರೀಫ್ ಎನ್‌ಐಎ ಕಸ್ಟಡಿಗೊಳಗಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿಸಿ ಈತನಕ ಬಂಧಿತರಾದವರ ಸಂಖ್ಯೆ   ೭ಕ್ಕೇರಿದೆ. ಇನ್ನೂ ಹಲವರು ಎನ್‌ಐಎಯ ಕಸ್ಟಡಿಯಲ್ಲಿದ್ದು ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.

ದಿಲ್ಲಿ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಜೈಶೆ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ಹೊಂದಿರುವ ನಂಟು ಈಗಾಗಲೇ ಸ್ಪಷ್ಟಗೊಂಡಿದೆ. ಈ ಭಯೋತ್ಪಾದಕ ಸಂಘಟನೆಯ ಸಂಪರ್ಕದಲ್ಲಿ ಭಾರತದ ವೈದ್ಯರಂತಹ ಅತ್ಯಂತ ಗೌರವಾನ್ವಿತ ವೃತ್ತಿಯಲ್ಲಿರುವವರೂ ಒಳಗೊಂಡಿರುವ ಕಳವಳಕಾರಿ ಮಾಹಿತಿಯೂ ಎನ್‌ಐಎಗೆ ಲಭಿಸಿದೆ. ಭಯೋತ್ಪಾದನೆ ಕೃತ್ಯಗಳಿಗೆ ಆಶಯ ವಿನಿಮಯ ನಡೆಸಲು ಉಗ್ರರು ಸಿಗ್ನಲ್ ಆಪ್‌ಗಳನ್ನು ಉಪಯೋಗಿ ಸುತ್ತಿದ್ದರು. ಭಾರತದ ಪ್ರಧಾನ ನಾಲ್ಕು ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವ ಸಂಚನ್ನೂ ಉಗ್ರರು ಹೂಡಿದ್ದರೆಂಬ ಮಾಹಿತಿಯೂ ಈಗ ಹೊರಬಂದಿದೆ.

You cannot copy contents of this page