ಕುಂಬಳೆ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕುಂಬಳೆ ಪಂಚಾಯತ್ನಲ್ಲಿ ಪ್ರಮುಖ ಪಕ್ಷಗಳ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಕುಂಬಳೆ ಪಂಚಾಯತ್ನಲ್ಲಿ ಹೊಸತಾಗಿ ರೂಪೀಕರಿಸಿದ ಶೇಡಿಕಾವು 24ನೇ ವಾರ್ಡ್ನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯ್ಕ್ ಸ್ಪರ್ಧಿಸುತ್ತಿದ್ದಾರೆ. ಕುಂಬಳೆ ಪೇಟೆ ಒಳಗೊಂಡ ಈ ವಾರ್ಡ್ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಈ ಹಿಂದೆ ಗೆಲುವು ಸಾಧಿಸಿದ್ದವು. ಇದೀಗ ಈ ವಾರ್ಡ್ನಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕೇಶವ ನಾಯ್ಕ್ ಸ್ಪರ್ಧಾ ಕಣಕ್ಕಿಳಿದಿದ್ದಾರೆ.
ಕುಂಬಳೆ ಪಂಚಾಯತ್ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪ್ರತಿಭಟಿಸಿ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಕೇಶವ ನಾಯ್ಕ್ ತಿಳಿಸಿದ್ದಾರೆ. ಪಂಚಾಯತ್ನಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ. ಮಾತ್ರವಲ್ಲ ಐದು ವರ್ಷ ಕಾಲ ಭ್ರಷ್ಟಾಚಾರ ನಡೆದಾಗ ಅದರ ವಿರುದ್ಧ ಯಾವುದೇ ಧ್ವನಿಯೆತ್ತದ ಬಿಜೆಪಿ, ಸಿಪಿಎಂ ಎಸ್ಡಿಪಿಐ ಸಹಿತ ವಿಪಕ್ಷಗಳು ಚುನಾವಣೆ ಸಮೀಪಿಸುತ್ತಿರುವಾಗ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿರುವುದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆಯೆಂದು ಕೇಶವ ನಾಯ್ಕ್ ಆರೋಪಿಸಿದ್ದಾರೆ.







