ನೀರ್ಚಾಲಿನಲ್ಲಿ ಸ್ಕೂಟರ್-ಕಾರು ಢಿಕ್ಕಿ : ಪೆಟ್ರೋಲ್ ಬಂಕ್ ನೌಕರ ಮೃತ್ಯು

ನೀರ್ಚಾಲು: ನೀರ್ಚಾಲಿನಲ್ಲಿ ಇಂದು ಬೆಳಿಗ್ಗೆ ಉಂಟಾದ ವಾಹನ ಅಪಘಾತದಲ್ಲಿ ಪೆಟ್ರೋಲ್ ಬಂಕ್ ನೌಕರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಈ ಅಪಘಾತವುಂಟಾಗಿದೆ. ಕನ್ಯಪ್ಪಾಡಿ ಬಳಿಯ ಮಾಡತ್ತಡ್ಕ ನಿವಾಸಿ ಯೂ ಸೀತಾಂಗೋಳಿ ಪೆಟ್ರೋಲ್ ಬಂಕ್ ನೌಕರನಾದ ಮುಹಮ್ಮದ್ ಸೈನುದ್ದೀನ್ (29) ಮೃತಪಟ್ಟ ದುರ್ದೈವಿ.

ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಎಸ್‌ಬಿಐ ನೀರ್ಚಾಲು ಶಾಖೆಯ ಮುಂಭಾಗದ ರಸ್ತೆಯಲ್ಲಿ ಇಂದು ಬೆಳಿಗ್ಗೆ ೬.೧೫ರ ವೇಳೆ ಈ ಅಪಘಾತವುಂಟಾಗಿದೆ. ಮುಹಮ್ಮದ್ ಸೈನುದ್ದೀನ್ ಪೆಟ್ರೋಲ್ ಬಂಕ್‌ನ ಕೆಲಸಕ್ಕಾಗಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ಆಘಾತಕ್ಕೆ ಸ್ಕೂಟರ್ ಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಹಾನಿಗೀಡಾಗಿದೆ. ಅಲ್ಲದೆ ಕಾರಿನ ಚಕ್ರ ಬೇರ್ಪಟ್ಟ ಸ್ಥಿತಿಯಲ್ಲಿದೆ.

ಮುಹಮ್ಮದ್ ಸೈನುದ್ದೀನ್ ಯೂತ್ ಲೀಗ್ ಸೀತಾಂಗೋಳಿ ಟೌನ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.    ಅಬ್ದುಲ್ ರಹಿಮಾನ್-ಆಯಿಶ ದಂಪತಿಯ ಪುತ್ರನಾದ ಮೃತರು ಪತ್ನಿ ಫೌಸಿ, ಪುತ್ರ ಇಬಾನ್, ಸಹೋದರ ಖಾದರ್, ಸಹೋದರಿ ರಸಿಯಾ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಪಘಾತ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page