ಕಾಸರಗೋಡು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿರುವ ಸಮಯ ನಿನ್ನೆ ಕೊನೆಗೊಂಡಾಗ ಜಿಲ್ಲೆಯಲ್ಲಿ 47 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದರ ಸೂಕ್ಷ್ಮ ಪರಿಶೀಲನೆ ಇಂದು ನಡೆಯಲಿದೆ. ಈ ತಿಂಗಳ 26ರವರೆಗೆ ನಾಮಪತ್ರ ಹಿಂತೆಗೆಯಲು ಅವಕಾಶ ನೀಡಲಾಗಿದೆ.
ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ನಾಮಪತ್ರ ಸಲ್ಲಿಸ ಲಿರುವ ಕೊನೆಯ ದಿನಾಂಕವಾದ ನಿನ್ನೆ ಮುಸ್ಲಿಂ ಲೀಗ್ನ ಅಭ್ಯರ್ಥಿ ಎಕೆಎಂ ಅಶ್ರಫ್ ಮೂರು ಸೆಟ್, ಎ.ಕೆ. ಆರಿಫ್ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲದೆ ಎಸ್ಡಿಪಿಐಯ ಕೆ.ಎಂ. ಅಶ್ರಫ್, ಬಿಎಸ್ಪಿಯ ಸಂಜೀವ, ಸ್ವತಂತ್ರ ಅಭ್ಯರ್ಥಿಗಳಾಗಿ ಮುಹಮ್ಮದ್ ಅಶ್ರಫ್, ಅಬ್ದುಲ್ ಲತೀಫ್ ಐ, ಜೀನ್ ಲವೀನಾ ಮೊಂತೇರೊ, ಮುಹಮ್ಮದ್ ಅಶ್ರಫ್ ಕೆ.ಎ, ಜೋನ್ ಡಿ’ಸೋಜಾ, ಮುಹಮ್ಮದ್ ರಫೀಕ್, ಎನ್. ಕೇಶವ ನಾಯ್ಕ್, ಡಿ. ಸುರೇಂದ್ರನ್ ನಾಯರ್ ಎಂಬಿವರು ನಾಮಪತ್ರ ಸಲ್ಲಿಸಿದ್ದಾರೆ.
ಕಾಸರಗೋಡು ಮಂಡಲದಲ್ಲಿ ಮುಸ್ಲಿಂಲೀಗ್ನ ಅಭ್ಯರ್ಥಿ ಮಾಹಿನ್ ಹಾಜಿ ನಾಲ್ಕು ಸೆಟ್ ನಾಮಪತ್ರ, ಮಾಹಿನ್ ಕೇಳೋಟ್ ಒಂದು, ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಮೂರು, ಐಎನ್ಎಲ್ ಅಭ್ಯರ್ಥಿ ಎಂ.ಎ. ಲತೀಫ್, ಎಡರಂಗ ಬೆಂಬಲಿತ ಶಾನ ವಾಸ್ ಎ.ಎ, ಸ್ವತಂತ್ರ ಅಭ್ಯರ್ಥಿಗಳಾದ ಶಾನವಾಸ್ ಪಿ.ಕೆ.ಎಂ, ಮೊಹಮ್ಮದ್ ಅಲಿ ಪತಾಹ್ ನಾಮಪತ್ರ ಸಲ್ಲಿಸಿದ್ದಾರೆ.
ಉದುಮ ಮಂಡಲದಲ್ಲಿ ಒಟ್ಟು 7 ಅಭ್ಯರ್ಥಿಗಳು 15 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಞಂಗಾಡ್ ಮಂಡಲದಲ್ಲಿ 7 ಅಭ್ಯರ್ಥಿಗಳು 13 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ತೃಕರಿಪುರ ಮಂಡಲದಲ್ಲಿ 9ಅಭ್ಯರ್ಥಿಗಳು 14 ನಾಮಪತ್ರ ಗಳನ್ನು ಸಲ್ಲಿಸಿದ್ದಾರೆ. ನಾಮಪತ್ರಗಳ ಹಿಂತೆಗೆತ, ಸೂಕ್ಷ್ಮ ಪರಿಶೀಲನೆ ಕಳೆದಾಗ ಎಷ್ಟು ಅಭ್ಯರ್ಥಿ ಗಳು ಸ್ಪರ್ಧಾ ಕಣದಲ್ಲಿದ್ದಾರೆಂಬ ಸ್ಪಷ್ಟ ಚಿತ್ರಣ ಲಭಿಸಲಿದೆ.






