ಕಬಡ್ಡಿ ಸ್ಥಳದಲ್ಲಿ ಹೊಡೆದಾಟ ತಡೆಯಲು ಯತ್ನಿಸಿದ ದ್ವೇಷ : ಯುವಕರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಎಂಟು ಮಂದಿ ಬಂಧನ

ಮುಳ್ಳೇರಿಯ: ಕಬಡ್ಡಿ ಆಟದ ಸ್ಥಳದಲ್ಲಿ ನಡೆದ ಹೊಡೆದಾಟವನ್ನು ತಡೆಯಲು ಯತ್ನಿಸಿದ ದ್ವೇಷದಿಂದ ಯುವಕರ ಮೇಲೆ ಹಲ್ಲೆ ನಡೆಸಿ ಕೊಲೆಗೈಯ್ಯಲು ಪ್ರಯತ್ನಿಸಲಾಯಿತೆಂಬ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.

ಆದೂರು ಬರ್ತಕುನ್ನು ಹೌಸ್‌ನ ಸಿ.ಆರ್. ತಾಜುದ್ದೀನ್ (36), ಅಬ್ದುಲ್ ಸತ್ತಾರ್ (30), ಸಿ.ಎ. ನಗರದ ಅಬ್ಬಾಸ್ ಫೈಸಲ್ ಎ.ಪಿ (32), ಮುಹಮ್ಮದ್ ಸುರಕ್ಕಾತ ವೈ.ಎಂ. (35), ಆದೂರು ಬಣ್ಣಾಂತಬಾಡಿಯ ಬಿ. ಮುಹಮ್ಮದ್ ರಫೀಕ್ (32), ಆದೂರು ಮುಕ್ಕೂರು ಹೌಸ್‌ನ ಆಶಿಕ್ (29), ಕುಂಟಾರು ಮಞಂಪಾರೆ ಹೌಸ್‌ನ ಎ.ಕೆ. ಅಬ್ದುಲ್ ರಹ್ಮಾನ್ ಅಕ್ಸಲ್ (19), ಸಿ.ಎ. ನಗರದ ಮುಹಮ್ಮದ್ ಹಾಸಿಫ್ (28) ಎಂಬಿವರು ಬಂಧಿತ ಆರೋಪಿ ಗಳಾಗಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗಳಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ.

ಮುಳ್ಳೇರಿಯ ಮೈಂದಪಾರೆಯ ಸುಲೈಮಾನ್ ಪಾರೀಸ್ (34) ನೀಡಿದ ದೂರಿನ ಪ್ರಕಾರ ದಾಖಲಿಸಿಕೊಂಡ ಪ್ರಕರಣದಲ್ಲಿ ಇದೀಗ ಬಂಧಿತರಾದವರು ಆರೋಪಿಗಳಾಗಿದ್ದಾರೆಂದು ಆದೂರು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 4ರಂದು ರಾತ್ರಿ 10.30 ಕ್ಕೆ ಮುಳ್ಳೇರಿಯ ಮದೀನ ಹೋಟೆಲ್ ಸಮೀಪ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಫೆಬ್ರವರಿ 28ರಂದು ಕಬಡ್ಡಿ ಟೂರ್ನ್‌ಮೆಂಟ್ ಸ್ಥಳದಲ್ಲಿ ನಡೆದ ಹೊಡೆದಾಟವನ್ನು ತಡೆಯಲು ಯತ್ನಿಸಿದ ದ್ವೇಷದಿಂದ ದೂರುಗಾರ ಹಾಗೂ ಸ್ನೇಹಿತರ ಮೇಲೆ ಹಲ್ಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಆದೂರು ಎಸ್.ಐ. ಜೋನ್, ಪೊಲೀಸರಾದ ಮಧು, ಸುಜೇಶ್ ಎಂಬಿವರು ಆರೋಪಿಗಳನ್ನು ಬಂಧಿಸಿದ ತಂಡದಲ್ಲಿದ್ದರು.

You cannot copy contents of this page