ಮುಂಜಾನೆ ನಡೆದ ಭೀಕರ ಘಟನೆ: ಯುವಕನನ್ನು ಕಡಿದು ಬರ್ಬರ ಕೊಲೆ; ಕೊಲೆಗಾರರಿಗಾಗಿ ತನಿಖೆ ತೀವ್ರ

ತಲಪಾಡಿ: ಬೈಕ್‌ನ್ನು ತಡೆದು ನಿಲ್ಲಿಸಿ ಯುವಕನನ್ನು ತಂಡವೊಂದು ಇರಿದು ಕೊಲೆಗೈದ ಘಟನೆ ತೊಕ್ಕೊಟ್ಟುನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೂಲತಃ ಕುದ್ರೋಳಿ ನಿವಾಸಿ ಹಾಗೂ ಕಳೆದ ಹಲವಾರು ವರ್ಷಗಳಿಂದ ತಲಪಾಡಿ ಬಳಿಯ ಉಚ್ಚಿಲ ಅಜ್ಜಿನಡ್ಕ ಮುಳ್ಳುಗುಡ್ಡೆಯಲ್ಲಿ ವಾಸವಾಗಿರು ಆರೀಫ್ ಹುಸೈನ್ ಯಾನೆ ಟ್ಯಾಬ್ಲೆಟ್ ಆರೀಫ್ (42)ನನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಮಂಗಳೂರಿನ ಧಕ್ಕೆಯಲ್ಲಿ ಮೀನು ವ್ಯಾಪಾರಿಯಾಗಿರುವ ಆರೀಫ್ ಹುಸೈನ್ ಇಂದು ಮುಂಜಾನೆ ಬೈಕ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ತೊಕ್ಕೊಟ್ಟು ಫ್ಲೈಓವರ್‌ಗೆ ತಲುಪಿದಾಗ ಕಾರಿನಲ್ಲಿ ತಲುಪಿದ ತಂಡವೊಂದು ಬೈಕನ್ನು ತಡೆದು ನಿಲ್ಲಿಸಿ ಆರೀಫ್‌ನನ್ನು ರಸ್ತೆಗೆ ಎಳೆದು ಹಾಕಿ ಕಡಿದು ಕೊಲೆಗೈದಿದೆ ಎನ್ನಲಾಗಿದೆ.

ಕೊಲೆ ಕೃತ್ಯದ ಬಳಿಕ ಅಕ್ರಮಿ ತಂಡ ಕಾರಿನಲ್ಲಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಿಳಿದು ಡಿಸಿಪಿ ಮಿಥುನ್‌ರ ನೇತೃತ್ವದಲ್ಲಿ ಪೊಲೀಸರ ತಂಡ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದೆ.

ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ ಕೊಲೆಗೀಡಾದ ಆರೀಫ್ ಹುಸೈನ್ ಎಂದು ಪೊಲೀಸರು ತಿಳಿಸಿದ್ದಾರೆ. ೨೦೨೨  ಮೇ ತಿಂಗಳಲ್ಲಿ ಆರೀಫ್‌ನನ್ನು ಕೊಲೆಗೈಯ್ಯಲು ಯತ್ನ ಉಂಟಾಗಿತ್ತು. ಬಜಾಲ್ ನಿವಾಸಿ ಟೊಪ್ಪಿ ನೌಫಲ್‌ನ ನೇತೃತ್ವದಲ್ಲಿ ಅಂದು ಆಕ್ರಮಣ ಉಂಟಾಗಿತ್ತು. ಈ ಪ್ರಕರಣದಲ್ಲಿ ನೌಫಲ್ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಆರೀಫ್ ಹುಸೈನ್‌ನ ಕೊಲೆ ಕೃತ್ಯದ ಬಳಿಕ ಸ್ಥಳದಿಂದ ಕಾರಿನಲ್ಲಿ ಪರಾರಿಯಾದ ತಂಡ ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲು ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ವಿಷಯವನ್ನು ಕೇರಳ ಪೊಲೀಸರಿಗೆ ತಿಳಿಸಲಾಗಿದೆ. ಇದರ ಆಧಾರದಲ್ಲಿ ಮುಂಜಾನೆ ೩.೩೦ರ ಬಳಿಕ ತಲಪಾಡಿ ಮೂಲಕ ಕಾಸರಗೋಡಿಗೆ ಆಗಮಿಸಿದ ವಾಹನಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಕೊಲೆಗಾರರು ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲು ಸಾಧ್ಯತೆ ಇಲ್ಲವೆಂದು ಕೇರಳ ಪೊಲೀಸ್ ತಿಳಿಸುತ್ತಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಲಪಾಡಿಯಲ್ಲಿ ತೀವ್ರ ತಪಾಸಣೆಯ ಬಳಿಕ ಮಾತ್ರವೇ ವಾಹನಗಳನ್ನು ಕೇರಳಕ್ಕೆ ಪ್ರವೇಶಿಸಲು ಬಿಡಲಾಗುತ್ತಿದೆ. ಇದರಿಂದಾಗಿ ಕೊಲೆ ಕೃತ್ಯದ ಬಳಿಕ ಇವರು ಕಾಸರಗೋಡಿಗೆ ಪ್ರಯಾಣಿಸಲಿರುವ ಸಾಧ್ಯತೆ ಕಡಿಮೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಿದ್ದರೂ ಗಡಿ ಪ್ರದೇಶಗಳಲ್ಲಿ ತೀವ್ರ ಜಾಗ್ರತೆ ಹಾಗೂ ನಿಗಾ ವಹಿಸಲು ನಿರ್ದೇಶ ನೀಡಲಾಗಿದೆ.

RELATED NEWS

You cannot copy contents of this page