ಮುಳ್ಳೇರಿಯ: ಮಳೆ ಬಂದರೂ, ಬಾರದಿದ್ದರೂ ಪದೇಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಮುಳ್ಳೇರಿಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ವಿದ್ಯುತ್ ವ್ಯತ್ಯಯದಿಂದ ಮನೆಗಳ ದೈನಂದಿನ ಚಟುವಟಿಕೆಗಳು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ವ್ಯಾಪಾರ-ವ್ಯವಹಾರಗಳ ಮೇಲೂ ಪರಿಣಾಮ ಬೀರುತ್ತಿದೆ.
ವಿದ್ಯುತ್ ಯಾವಾಗ ಕಡಿತವಾಗುತ್ತದೆ, ಯಾವಾಗ ಪುನಃ ಪೂರೈಕೆಯಾಗುತ್ತದೆ ಎಂಬುದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ಸಮಸ್ಯೆಗೆ ತಾತ್ಕಾಲಿಕ ದುರಸ್ತಿಗಿಂತ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವಿದ್ಯುತ್ ತಂತಿಗಳು ಹಾದುಹೋಗುವ ಪ್ರದೇಶಗಳಲ್ಲಿ ಮರಗಳ ರೆಂಬೆ-ಕೊAಬೆಗಳು ತಂತಿಗಳ ಸಮೀಪಕ್ಕೆ ಬೆಳೆದಿರುವುದು ಹಾಗೂ ಕೆಲವು ಕಡೆ ಪೊದೆ-ಗಿಡಗಂಟಿಗಳು ತಂತಿಗಳನ್ನು ಆವರಿಸಿರುವುದರಿಂದ ಗಾಳಿ-ಮಳೆಯ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿದ್ಯುತ್ ತಂತಿಗಳ ಸುತ್ತಮುತ್ತ ನಿಯಮಿತವಾಗಿ ನಿರ್ವಹಣೆ ನಡೆಸುವ ಅಗತ್ಯವಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕಾಟಾಚಾರಕ್ಕೆ ಟಚ್ಚಿಂಗ್ ಮಾಡುವುದರಿಂದ ಪ್ರಯೋಜನವಿಲ್ಲ. ವಿದ್ಯುತ್ ತಂತಿಗಳಿಗೆ ತಾಗುವ ಮರಗಳ ಕೊಂಬೆಗಳನ್ನು ಕತ್ತರಿಸುವುದರ ಜೊತೆಗೆ, ಕತ್ತರಿಸಿದ ರೆಂಬೆ-ಕೊAಬೆಗಳನ್ನು ಅಲ್ಲಿಯೇ ಬಿಟ್ಟು ಹೋಗದೆ ಅವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಜವಾಬ್ದಾರಿಯನ್ನೂ ನಿರ್ವಹಣಾ ಕಾರ್ಯದಲ್ಲಿ ಸೇರಿಸಬೇಕು ಎಂಬುದು ಜನರ ಪ್ರಮುಖ ಬೇಡಿಕೆಯಾಗಿದೆ. ಕಡಿದ ಕೊಂಬೆಗಳನ್ನು ರಸ್ತೆಯ ಬದಿ ಅಥವಾ ಮನೆಗಳ ಸಮೀಪ ಬಿಟ್ಟುಹೋಗುವುದರಿಂದ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ಇತರ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ವಿದ್ಯುತ್ ಕಂಬಗಳು, ತಂತಿಗಳು, ಪರಿವರ್ತಕಗಳು ಸೇರಿದಂತೆ ವಿದ್ಯುತ್ ವ್ಯವಸ್ಥೆಯನ್ನೂ ಕಾಲಕಾಲಕ್ಕೆ ಪರಿಶೀಲಿಸಿ ಅಗತ್ಯ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಬೇಕು. ಪದೇಪದೇ ದೋಷ ಉಂಟಾಗುವ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೆ ವಿದ್ಯುತ್ ವ್ಯತ್ಯಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸ್ಥಳ ಪರಿಶೀಲನೆಗೆ ಆಗ್ರಹ
ಮುಳ್ಳೇರಿಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪದೇಪದೇ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯಕ್ಕೆ ನಿಖರ ಕಾರಣ ಪತ್ತೆಹಚ್ಚಲು ಸಂಬAಧಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿದ್ಯುತ್ ತಂತಿಗಳ ಸಮಗ್ರ ಪರಿಶೀಲನೆ ನಡೆಸಿ, ಅಗತ್ಯವಿರುವ ಕಡೆಗಳಲ್ಲಿ ಮರಗಳ ರೆಂಬೆ-ಕೊAಬೆ ಹಾಗೂ ಪೊದೆಗಳನ್ನು ತೆರವುಗೊಳಿಸಬೇಕು. ಟಚ್ಚಿಂಗ್ ಮಾಡಿದ ಬಳಿಕ ಕಡಿದ ಕೊಂಬೆಗಳನ್ನು ಸ್ಥಳದಲ್ಲೇ ಬಿಟ್ಟುಹೋಗದೆ ಸಂಪೂರ್ಣವಾಗಿ ತೆರವುಗೊಳಿಸಬೇಕು. ವಿದ್ಯುತ್ ಕಂಬ, ತಂತಿ ಹಾಗೂ ಪರಿವರ್ತಕಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಂಡು, ಪದೇಪದೇ ಉಂಟಾಗುತ್ತಿರುವ ವಿದ್ಯುತ್ ಕಡಿತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಮುಳ್ಳೇರಿಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಸ್ಥಳೀಯರು ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
-ರವೀಂದ್ರ ರೈ ಮಲ್ಲಾವರ






