ಕಾಸರಗೋಡು: ಜಿಲ್ಲೆಯ ಬಂದರುಗಳಿಂದ ಮೀನು ಹಿಡಿದು ಮಾರುಕಟ್ಟೆಗೆ ತರುವ ಸಣ್ಣ ಭೂತಾಯಿ ಮೀನುಗಳನ್ನು ಫಿಶರೀಸ್ ಇಲಾಖೆ, ಎನ್ಫೋರ್ಸ್ಮೆಂಟ್ ಜಂಟಿಯಾಗಿ ವಶಪಡಿಸುತ್ತಿರುವಾಗ ಮೀನು ಮಾರುಕಟ್ಟೆಗಳಲ್ಲಿ ಸಣ್ಣ ಭೂತಾಯಿಯ ಮಾರಾಟ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ರಾಜ್ಯದ ಆಳಸಮುದ್ರದಿಂದ ಮೀನು ಮರಿಗಳನ್ನು ಸಂಗ್ರಹಿಸಿ ಅನ್ಯರಾಜ್ಯಗಳಿಗೆ ಸಾಗಿಸುತ್ತಿ ರುವುದಾಗಿಯೂ ಆರೋಪವಿದೆ. ೧೦ ಸೆ.ಮೀ.ಗಿಂತ ಕೆಳಗಿನ ಗಾತ್ರದ ಸಣ್ಣ ಮೀನು ಮರಿಗಳು ವ್ಯಾಪಕವಾಗಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ವಿವಿಧ ಬಂದರುಗಳಿಂದ ಫಿಶರೀಸ್ ಇಲಾಖೆ ಅಧಿಕಾರಿಗಳು ಇವುಗಳನ್ನು ವಶಪಡಿಸಿದ್ದರು. ಮಂಜೇಶ್ವರದಿಂದ ೩೦ ಲಾರಿ ಮೀನಿನ ಮರಿಗಳನ್ನು ಇತ್ತೀಚೆಗೆ ಮೇವು ಉತ್ಪಾದಿಸುವ ಅನ್ಯರಾಜ್ಯದ ಫಿಶ್ ಮಿಲ್ಗಳಿಗೆ ಕೊಂಡೊಯ್ದಿರು ವುದಾಗಿ ಮೀನು ಕಾರ್ಮಿಕರೇ ಆರೋಪಿಸುತ್ತಾರೆ.
ಮೀನು ಮರಿಗಳನ್ನು ಹಿಡಿಯಲು ತಲುಪುವ ಫಿಶರೀಸ್ ಇಲಾಖೆ ಅಧಿಕಾರಿಗಳನ್ನು ಮೀನು ಕಾರ್ಮಿಕರು ತಡೆಯುತ್ತಿರುವುದು ಸಹಿತದ ಘಟನೆ ಗಳು, ಪೊಲೀಸರ ಹಸ್ತಕ್ಷೇಪ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದೆ. ಆದರೆ ವಶಪಡಿಸಿದ ಸಣ್ಣ ಭೂತಾಯಿಗಳನ್ನು ನಾಶಪಡಿಸಿ, ಪುನಃ ಸಮುದ್ರಕ್ಕೆ ಹಾಕಿ ನಾಶಪಡಿಸುವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದರು. ಕೆಲವು ಕಡೆಗಳಲ್ಲಿ ಮೀನು ಹಿಡಿಯಲು ಉಪಯೋಗಿಸುತ್ತಿದ್ದ ಬಲೆಗಳನ್ನು, ದೋಣಿಗಳನ್ನು ಕಸ್ಟಡಿಗೆ ತೆಗೆದಿರುವುದಾಗಿಯೂ ಹೇಳಲಾಗುತ್ತಿದೆ. ಸಮುದ್ರದಿಂದ ೧೦ ಸೆಂಟಿ ಮೀಟರ್ಗಿಂತ ಕೆಳಗಿನ ಗಾತ್ರದ ಮೀನು ಮರಿಗಳನ್ನು ಹಿಡಿಯುವುದು ಸಮುದ್ರದ ಪ್ರಾಕೃತಿಕ ವ್ಯವಸ್ಥೆ, ಭೂತಾಯಿಯ ಲಭ್ಯತೆಗೆ ಬಹಳವಾಗಿ ತೊಂದರೆಯಾಗಲಿದೆ ಎಂದು ಕೇಂದ್ರ ಸಮುದ್ರ ಮೀನು ಸಂಶೋಧನಾ ಕೇಂದ್ರ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ ಫಿಶರೀಸ್ ಇಲಾಖೆ ಕ್ರಮವನ್ನು ತೀವ್ರಗೊಳಿಸಿದೆ. ಬಲಶಾಲಿ ಇಂಜಿನ್ ಇರುವ ಎರಡು ದೋಣಿಗಳಲ್ಲಿ ಡಬಲ್ ಬಲೆ ಉಪಯೋಗಿಸಿ ಅನುವಾದ ನೀಡಿರುವುದಕ್ಕಿಂತಲೂ ಹೆಚ್ಚು ಆಳದಿಂದ ಮೀನು ಮರಿಗಳನ್ನು ಹಿಡಿಯಲಾಗುತ್ತದೆ. ಇವುಗಳನ್ನು ಆಂಧ್ರ, ಒಡಿಶ್ಶಾ, ಗುಜರಾತ್, ಗೋವಾ, ತಮಿಳುನಾಡು, ಕರ್ನಾಟಕ ಮೊದಲಾದ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಇದಕ್ಕಾಗಿ ಉತ್ತರ ಜಿಲ್ಲೆಗಳನ್ನು ಕೇಂದ್ರೀಕರಿಸಿ ಮಾಫಿಯಾಗಳು ಕಾರ್ಯಾಚರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಲಕ್ಷಾಂತರ ರೂ. ಮೌಲ್ಯದ ಫಿಶ್ ಆಯಿಲ್, ಫಿಶ್ ಪೌಡರ್ ಸಿದ್ಧಪಡಿಸಲು ಕೂಡಾ ಮೀನು ಮರಿಗಳನ್ನು ಉಪಯೋಗಿಸುತಿ ರುವುದಾಗಿಯೂ ಆರೋಪವಿದೆ. ಕೇರಳದ ಮೀನು ಆಹಾರ ಪ್ರೇಮಿಗಳಿಗೆ ಪ್ರೀತಿಯ ಮೀನಾಗಿದೆ ಭೂತಾಯಿ. ಭೂತಾಯಿ ಮರಿಗಳನ್ನು ಹಿಡಿಯುವುದರಿಂದಾಗಿ ಮುಂದಿನ ವರ್ಷಗಳಲ್ಲಿ ಭೂತಾಯಿಯ ಲಭ್ಯತೆ ಕಡಿಮೆಯಾಗುತ್ತಿರುವುದಾಗಿ ಲೆಕ್ಕಗಳಿಂದ ಸ್ಪಷ್ಟವಾಗುತ್ತಿದೆ. ಒಂದು ಬಾಕ್ಸ್ಗೆ ೪೦ರಿಂದ ೫೦ ರೂ.ಗೆ ಮಾರಾಟ ಮಾಡುವ ಮೀನು ಮರಿಗಳಿಗೆ ಈಗ ಅನ್ಯರಾಜ್ಯದಲ್ಲಿ ೪೦೦೦ ರೂ. ವರೆಗೆ ನೀಡುತ್ತಿರುವುದಾಗಿ ಹೇಳಲಾಗುತ್ತಿದೆ. ಭಾರೀ ಲಾಭದಲ್ಲಿ ಕಣ್ಣಿಟ್ಟು ಆಳ ಸಮುದ್ರದ ಮೀನು ಮರಿಗಳನ್ನು ಹಿಡಿಯಲಾಗುತ್ತಿದೆ. ಇದು ಮತ್ಸ್ಯ ಸಂಪತ್ತಿಗೆ ದೊಡ್ಡ ಬೆದರಿಕೆ ಸೃಷ್ಟಿಸುತ್ತಿದೆ ಎಂದು ಪರಂಪರಾಗತ ಮೀನು ಕಾರ್ಮಿಕರು ಆರೋಪಿಸುತ್ತಾರೆ.
ಸಮುದ್ರದಿಂದ ಸಣ್ಣ ಮೀನುಗಳನ್ನು ಹಿಡಿಯುವುದಕ್ಕೆ ತಡೆ ಹಾಕಲು ಮುಂದಿನ ದಿನಗಳಲ್ಲೂ ತೀವ್ರ ತಪಾಸಣೆ ಮುಂದುವರಿಯಲಿದೆ ಎಂದು ಫಿಶರೀಸ್ ಇಲಾಖೆ ಅಧಿಕಾರಿಗಳು ಹೇಳುತ್ತಿರುವಾಗಲೇ ಮೀನು ಮಾರುಕಟ್ಟೆಗಳಲ್ಲಿ ಭೂತಾಯಿ ಮರಿಗಳ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ.





