ಕಾಸರಗೋಡು: ಆಟೋ ವರ್ಕ್‌ಶಾಪ್‌ನ ಮೆಕ್ಯಾನಿಕ್ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಡಿ ಕೊಲ್ಲಂಪಾಡಿ ನಿವಾಸಿ ಟಿ. ಅಜೀಶ್ (31) ಸಾವನ್ನಪ್ಪಿದ ಯುವಕ. ಇವರು ನಿನ್ನೆ ಅಪರಾಹ್ನ ಮನೆ ಪಕ್ಕದ ಹಿತ್ತಿಲ ಮರದ ರೆಂಬೆಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಬೇತೂರು ಪಾರದ ಗೋಪಾಲ- ನಿರ್ಮಲ ದಂಪತಿ ಪುತ್ರನಾಗಿರುವ ಮೃತರು ಕಳೆದ ಹಲವು ವರ್ಷಗಳಿಂದ ಪಾಡಿ ಕೊಲ್ಲಂಪಾಡಿ ಯಲ್ಲಿರುವ ಸಹೋದರ ರತೀಶ್‌ರ ಮನೆಯಲ್ಲಿ ವಾಸಿಸುತ್ತಿದ್ದರು. ಇವರು ಚೆರ್ಕಳ ನಾಲ್ಕನೇ ಮೈಲುಗಲ್ಲಿನಲ್ಲಿರುವ ಆಟೋ ವರ್ಕ್‌ಶಾಪ್‌ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು. ಮೃತರು ಹೆತ್ತವರ ಹೊರತಾಗಿ ಇತರ ಸಹೋದರರಾದ ಅನೀಶ್, ಅನೂಪ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






