ಮುಳ್ಳೇರಿಯ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಕುಂಟಾರು ಉಯಿತ್ತಡ್ಕ ಮಾಯಿಲಂಕೋಟೆ ನಿವಾಸಿ ಅರಬಿ ಎಂಬವರ ಪುತ್ರ ಮುಹಮ್ಮದ್ ನೌಫಲ್ ಪಿ.ಎ (30) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ೭.೩೦ರ ವೇಳೆ ಘಟನೆ ನಡೆದಿದೆ. ನೌಫಲ್ ಪಾಂಡಿ ಬಳವಂತಡ್ಕದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಸಿಡಿಲಿನ ಆಘಾತವುಂಟಾಗಿದ್ದು, ಇದರಿಂದ ತೀವ್ರ ಅಸ್ವಸ್ಥಗೊಂಡ ನೌಫಲ್ರನ್ನು ಕೂಡಲೇ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗ ಲಿಲ್ಲ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹದ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ ಕುಂಟಾರು ಮಸೀದಿ ಬಳಿ ನಡೆಯಿತು.
ನೌಫಲ್ ತಿರುವನಂತಪುರದಲ್ಲಿ ಜ್ಯೂಸ್ ಅಂಗಡಿಯಲ್ಲಿ ನೌಕರನಾಗಿದ್ದರು. ಇತ್ತೀಚೆಗೆ ಮನೆಗೆ ಬಂದಿದ್ದರು. ಇವರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.
ಮೃತರು ತಂದೆ, ತಾಯಿ ನಬೀಸ, ಪತ್ನಿ ಸೌರಾಬಿ, ಮಕ್ಕಳಾದ ಅಹದ್, ಆದಿಲ್, ಸಹೋದರ-ಸಹೋದರಿಯರಾದ ಮುಹಮ್ಮದ್ ಕುಂಞಿ, ಅಬ್ದುಲ್ ಖಾದರ್, ಫಾತಿಮತ್ ಸುಹರ, ಜುಬೈದ, ಮರಿಯಮ್ಮ, ಹಲೀಮ, ಖದೀಜ, ಸಲ್ಮ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






