ಕಾಸರಗೋಡು: ನಗರದ ಕೋಟೆಕಣಿ ರಾಮನಗರದಲ್ಲಿರುವ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ ನವಂಬರ್ ೧ರಂದು ಸಂಜೆ 5.3೦ಕ್ಕೆ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಕನ್ನಡ ನಾಡಗೀತೆ ಸಮೂಹ ಗಾಯನದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಜೆ. ಸೋಮಶೇಖರ ಉದ್ಘಾಟಿಸುವರು. ಕ.ಸಾ.ಪ ಗಡಿನಾಡ ಘಟಕದ ಅಧ್ಯಕ್ಷ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಬಿಜೆಪಿ ನೇತಾರ ನ್ಯಾಯವಾದಿ ಶ್ರೀಕಾಂತ್, ಕನ್ನಡ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಶಿವಪ್ರಸಾದ್ ಎಚ್.ಸಿ ಮುಖ್ಯ ಅತಿಥಿಗಳಾಗಿರುವರು. ಕಲಾವಿದ ಸುನಿಲ್ ಕೋಲಾರ ಶುಭಾಶಂಸನೆಗೈಯ್ಯುವರು. ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿಯುವರು. ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ತೆಕ್ಕೇಕರೆ ಶಂಕರನಾರಾಯಣ ಭಟ್‌ರನ್ನು ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡುವರು. ವಿದುಷಿ ಸೌಮ್ಯ ಶ್ರೀಕಾಂತ್ ಕಾಸರಗೋಡು ಅವರಿಗೆ ರಾಜ್ಯೋತ್ಸವ ಗೌರವಾರ್ಪಣೆ ಮಾಡಲಾಗುವುದು. ಅಭಿಲಾಷ ಮುಕುಂದರಾಜ್, ಕನ್ನಡ ಜಾಗೃತಿ ಸಮಿತಿ ಸಂಚಾಲಕಿ ಕಾವ್ಯಕುಶಲ ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ನಾಟ್ಯಮಂಟಪ ಮಧೂರು ಇವರಿಂದ ಗೆಜ್ಜೆಹೆಜ್ಜೆ ಕಾರ್ಯಕ್ರಮ ನಡೆಯಲಿರುವುದು.





