ಸಮಾನಾಂತರ ಹೋಟೆಲ್‌ಗಳು, ಗೂಡಂಗಡಿಗಳ ವಿರುದ್ಧ ಹೋಟೆಲ್ ಮಾಲಕರಿಂದ ನಾಳೆ ಪ್ರತಿಭಟನೆ

ಕಾಸರಗೋಡು: ಸಮಾನಾಂತರ ಹೋಟೆಲ್‌ಗಳು ಮತ್ತು ಗೂಡಂಗಡಿಗಳ ವಿರುದ್ಧ ನಾಳೆ ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್‌ನ ಜಿಲ್ಲಾ ಸಮಿತಿ ತೀರ್ಮಾನಿಸಿದೆಯೆಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.

  ನಾಳೆ ಬೆಳಿಗ್ಗೆ 1೦ ಗಂಟೆಗೆ ಕಾಸರಗೋಡಿನಲ್ಲಿರುವ ಅಸೋಸಿಯೇಶನ್‌ನ ಜಿಲ್ಲಾ ಸಮಿತಿ ಕಚೇರಿ ಬಳಿಯಿಂದ ಹೋಟೆಲ್ ಮಾಲಕರು  ಪ್ರತಿಭಟನಾ ಮೆರವಣಿಗೆ ಆರಂಭಿಸುವರು. ಮೆರವಣಿಗೆ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಯಾಗಿ ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.

ಸಮಾನಾಂತವಾಗಿ ಕಾರ್ಯವೆಸಗುತ್ತಿರುವ ಹೋಟೆಲ್‌ಗಳು ಮತ್ತು ಗೂಡಂಗಡಿಗಳು ರಾಜ್ಯದ ಹೋಟೆಲ್ ಉದ್ಯಮದ ಮೇಲೆ  ತೀವ್ರ ಪರಿಣಾಮ ಬೀರಿ  ಭಾರೀ ನಷ್ಟ ಎದುರಿಸುವಂತೆ ಮಾಡಿದೆ. ಅದರಿಂದಾಗಿ ಅಂತಹ  ಹೋಟೆಲ್‌ಗಳು ಮತ್ತು ಗೂಡಂಗಡಿಗಳನ್ನು ಮುಚ್ಚಬೇಕೆಂಬ ಬೇಡಿಕೆ  ಮುಂದಿರಿಸಿ  ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆಯೆಂದು ಅಸೋಸಿಯೇಶನ್‌ನ ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ, ಜಿಲ್ಲಾಧ್ಯಕ್ಷ ರರುವೀರ್  ಪೈ, ರಾಜ್ಯ ಕಾರ್ಯದರ್ಶಿ ನಾರಾಯಣ ಪೂಜಾರಿ, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಗಜಾಲಿ ತಿಳಿಸಿದ್ದಾರೆ. 

ನಾಳೆ ಕಾಸರಗೋಡಿನಲ್ಲಿ ನಡೆಯುವ ಕಾರ್ಯಕ್ರಮದ ಬಳಿಕ ಜಿಲ್ಲೆಯ  ವಿವಿಧೆಡೆಗಳಲ್ಲಿ ಕಾರ್ಯವೆಸಗುತ್ತಿರುವ 1೦1 ಗೂಡು ಹೋಟೆಲ್‌ಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಇತ್ತೀಚೆಗೆ ನಿಧನಹೊಂದಿದ ಮುಳ್ಳೇರಿಯ ದುರ್ಗಾ ಹೋಟೆಲ್ ಮಾಲಕರ  ಕುಟುಂಬಕ್ಕೆ ಸಂಘಟನೆಯ ಕುಟುಂಬ ಸುರಕ್ಷಾ ಯೋಜನೆ ವತಿಯಿಂದ 1೦ ಲಕ್ಷ ರೂ. ಧನ ಸಹಾಯವನ್ನು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ.ಆರ್. ರಸಾಕ್ ಹಸ್ತಾಂತರಿಸುವರೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನಾ ಸಭೆಯನ್ನು ಅಸೋಸಿಯೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ.ಆರ್. ರಸಾಕ್ ಉದ್ಘಾಟಿಸುವರು . ಜಿಲ್ಲಾಧ್ಯಕ್ಷ ರಘುವೀರ್ ಪೈ ಅಧ್ಯಕ್ಷತೆ ವಹಿಸುವರು. ಅಸೋಸಿಯೇಶನ್‌ನ ರಾಜ್ಯ ಕಾರ್ಯನಿರ್ವಹಣಾಧ್ಯಕ್ಷ ಎನ್. ಸುಗುಣನ್ ಪ್ರಧಾನ ಭಾಷಣ ಮಾಡುವರು. ರಾಜ್ಯ ಉಪಾಧ್ಯಕ್ಷ ಶಿನೋಜ್ ರೆಹ್ಮಾನ್ ಮುಖ್ಯ ಅತಿಥಿಯಾಗಿ  ಭಾಗವಹಿಸುವರು. 

You cannot copy contents of this page