ಬದಿಯಡ್ಕ: ಕಳೆದ ಮೂರು ದಿನಗಳಿಂದ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿದ್ದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಿನ್ನೆ ಸಮಾಪ್ತಿಗೊಂಡಿತು. ಕಲೋತ್ಸವದಲ್ಲಿ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆ 448 ಅಂಕಗಳೊಂ ದಿಗೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ಮುಹಿಮ್ಮಾತ್‌ನಗರ ಮುಹಿಮ್ಮಾತ್ ಎಚ್‌ಎಸ್‌ಎಸ್ 418 ಅಂಕಗಳೊಂದಿಗೆ ದ್ವಿತೀಯ, ಎಂಎಸ್‌ಸಿಎಚ್‌ಎಸ್ ನೀರ್ಚಾಲು 412 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದೆ. ಎಸ್‌ಎಸ್‌ಎಚ್‌ಎಸ್ ಶೇಣಿ 388 ಜಿವಿಎಚ್‌ಎಸ್‌ಎಸ್ ಕಾರಡ್ಕ 381, ಎಸ್‌ಎಪಿಎಚ್‌ಎಸ್ ಅಗಲ್ಪಾಡಿ 348, ಎಸ್‌ಎಸ್‌ಎಚ್ ಎಸ್‌ಎಸ್ ಕಾಟುಕುಕ್ಕೆ 344, ಜಿವಿಎಚ್‌ಎಸ್‌ಎಸ್ ಮುಳ್ಳೇರಿಯ 312, ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ 303, ಜಿಎಚ್‌ಎಸ್‌ಎಸ್ ಕುಂಬಳೆ 279, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ 275, ಜಿಎಚ್‌ಎಸ್ ಎಸ್ ಅಡೂರು 265 ಅಂಕಗಳನ್ನು ಗಳಿಸಿದೆ.
ಒಟ್ಟು 13 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆದಿದ್ದು ವಿವಿಧ ಶಾಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅತ್ಯಂತ ಸಂಭ್ರಮ, ಸಡಗರದಿಂದ ನಡೆದ ಮಕ್ಕಳ ಕಲಾಪ್ರತಿಭೆಯನ್ನು ವೀಕ್ಷಿಸಲು ನಾಡಿನ ವಿವಿಧ ಭಾಗಗಳಿಂದಲೂ ಜನರು ತಲುಪಿದ್ದರು. ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಯಿತು. ಶಾಲೆ ಅಧ್ಯಾಪಕ ವೃಂದ, ರಕ್ಷಕ-ಶಿಕ್ಷಕ ಸಂಘ, ಜನಪ್ರತಿನಿಧಿಗಳು, ಸಾರ್ವಜನಿ ಕರ ಹಾಗೂ ಕಲಾ ಪ್ರೇಮಿಗಳ ಸಹಕಾರದೊಂದಿಗೆ ಕಲೋತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ವೇದಿಕೇತರ ಸ್ಪರ್ಧೆಗಳು ಅಕ್ಟೋಬರ್ 16,17ರಂದು ನಡೆದಿತ್ತು. ವೇದಿಕೆ ಸ್ಪರ್ಧೆಗಳು ನವಂಬರ್ 2ರಿಂದ ಆರಂಭಗೊಂಡು ನಿನ್ನೆ ಸಂಜೆ ಸಮಾಪ್ತಿಗೊಂಡಿತು. ಕಲೋತ್ಸವ ನಗರಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಕಲಾಸಕ್ತರು ಹಾಗೂ ಅತಿಥಿಗಳಿಗೆ ಊಟೋಪಚಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಏರ್ಪಡಿಸುವಲ್ಲಿ ಸಂಘಾಟಕರು ಹಾಗೂ ಸ್ವಯಂ ಸೇವಕರ ಪ್ರಯತ್ನ ಸರ್ವರ ಪ್ರಶಂಸೆಗೆ ಪಾತ್ರವಾಯಿತು.




