ಬದಿಯಡ್ಕ: 65ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಪೆರಡಾಲ ನವಜೀವನ ಶಾಲೆಯಲ್ಲಿ ಸಮಾಪ್ತಿಗೊಂಡಿತು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಹಾಗೂ ಅವರ ಸರ್ವತೋಮುಖ ಬೆಳವಣಿಗೆಗೆ ಶಾಲಾ ಕಲೋತ್ಸವಗಳು ಸೂಕ್ತ ವೇದಿಕೆಯಾಗಿದ್ದು, ಕಲೋತ್ಸವನ್ನು ಯೋಜನಾಬದ್ಧವಾಗಿ ಆಯೋಜಿಸಿದ ಸಂಘಟಕರ ಶ್ರಮವನ್ನು ಶ್ಲಾಘಿಸಿದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಪಂ. ಅಧ್ಯಕ್ಷ ಡಿ. ಶಂಕರ, ಚೆಂಗಳ ಪಂ. ಅಧ್ಯಕ್ಷ ವಸಂತ ಅಜಕ್ಕೋಡು, ಎಣ್ಮಕಜೆ ಪಂ. ಅಧ್ಯಕ್ಷೆ ಕುಸುಮಾವತಿ, ಅಶ್ವಿನಿ ಕೆ.ಎಂ., ಹಮೀದ್ ಕೆಡೆಂಜಿ, ರಜಿನಿ ಸಂದೀಪ್, ಮಹೇಶ್ ವಳಕುಂಜ, ಮಾಹಿನ್ ಕೇಳೋಟ್ ಸಹಿತ ಹಲವರು ಭಾಗವಹಿಸಿದರು. ಮುಖ್ಯೋಪಾಧ್ಯಾ ಯಿನಿ ಶಾಹಿದಾ ಬೀವಿ ವರದಿ ನೀಡಿದರು. ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಸ್ವಾಗತಿಸಿ, ಸಂಚಾಲಕ ಕೆ. ಪ್ರಭಾಕರನ್ ನಾಯರ್ ವಂದಿಸಿದರು. ರಾಜೇಶ್ ಮಾಸ್ತರ್, ಪ್ರಸಾದ್ ಮಾಸ್ತರ್ ನಿರೂಪಿಸಿದರು.






