ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕುಟ್ಟಿಕ್ಕೋಲ್‌ನಲ್ಲಿ ಅಂಗಡಿಯಿಂದ ಹಾಡಹಗಲೇ 45,೦೦೦ ರೂಪಾಯಿ ಕಳವುಗೈದ ಪ್ರಕರಣದಲ್ಲಿ ಕುಖ್ಯಾತ ಆರೋಪಿಯಾದ ಇರಿಟ್ಟಿ ಪೆರಿಂಗಾರಿ ಕುರುವಿಕಾಟಿಲ್ ಸಜು ಯಾನೆ ಕುರುವಿ ಸಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರಸ್ತುತ ನೀಲೇಶ್ವರ ತೈಕಡಪ್ಪುರದಲ್ಲಿ ವಾಸಿಸುತ್ತಿದ್ದನು. ಕಳವಿನ ಹಿಂದೆ ಕುರುವಿ ಸಜು ಆಗಿದ್ದಾನೆಂದು ತಿಳಿಸಿ ಜಿಲ್ಲಾ ಪೊಲೀಸ್ ಗುಪ್ತಚರ ವಿಭಾಗ ನೀಡಿದ ವರದಿಯ ಆಧಾರದಲ್ಲಿ ಬೇಡಗಂ ಎಸ್‌ಐ ಕೆ. ಉಮೇಶ್, ಎಎಸ್‌ಐ ನಾರಾಯಣನ್, ಪೊಲೀಸರಾದ ಬಿನೀಶ್, ವಿನೀಶ್ ಎಂಬಿವರು ತೈಕಡಪ್ಪುರಕ್ಕೆ ತಲುಪಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಡಿಸೆಂಬರ್ ೨೨ರಂದು ಮಧ್ಯಾಹ್ನ ೧ ಗಂಟೆಗೆ ಅಂಗಡಿಯಿಂದ ಕಳವು ನಡೆದಿತ್ತು. ಕುಟ್ಟಿಕ್ಕೋಲ್ ನೆರುದ ಸ್ವಾಶ್ರಯ ಸಂಘದ ಹಣವನ್ನು ಆರೋಪಿ ಕಳವುಗೈದಿದ್ದಾನೆ. ಹಣವನ್ನು ಬೇರೊಬ್ಬರಿಗೆ ನೀಡಲು ಕುಟ್ಟಿಕ್ಕೋಲ್ ಪೇಟೆಯಲ್ಲಿರುವ ಪನಚ್ಚಿಕ್ಕಾಡ್ ಕುಂಞಿಕೃಷ್ಣನ್‌ರ ದಿನಸು ಅಂಗಡಿಯಲ್ಲಿ ನೀಡಲಾಗಿತ್ತು. ಕುಂಞಿಕೃಷ್ಣನ್ ಅಂಗಡಿಯಿಂದ ಹೊರ ಹೋದ ಸಂದರ್ಭದಲ್ಲಿ ಮೇಜಿನಲ್ಲಿದ್ದ ಹಣವನ್ನು ಕಳವು ನಡೆಸ ಲಾಗಿದೆ. ಕಳ್ಳನದ್ದೆಂದು ಸಂಶಯಿಸುವ ಸಿಸಿಟಿವಿ ದೃಶ್ಯಗಳು ಕೂಡಾ ಲಭಿಸಿತ್ತು. ಅದನ್ನು ಪರಿಶೀಲಿಸಿದಾಗ ಕಳವು ನಡೆಸಿರುವುದು ಕುರುವಿ ಸಜು ಆಗಿದ್ದಾನೆಂದು ಖಚಿತಗೊಂಡಿತ್ತೆಂದು ಪೊಲೀಸ್ ಮೂಲಗಳು ತಿಳಿಸಿವೆ. ೨೫ರಷ್ಟು ಕಳವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಜಿಲ್ಲೆಯಲ್ಲಿ ಆದೂರು, ಕಾಸರಗೋಡು, ವೆಳ್ಳರಿ ಕುಂಡ್, ಹೊಸದುರ್ಗ ಪೊಲೀಸ್ ಠಾಣೆ ಗಳಲ್ಲಿ ಈತನ ವಿರುದ್ಧ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







