ಪೋಕ್ಸೋ ಪ್ರಕರಣದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ: ತಾಸುಗಳೊಳಗಾಗಿ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿ ಕಾಸರಗೋಡು ಪೊಲೀಸ್ ಠಾಣೆಯಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿ ನಂತರ ನಡೆಸಿದ ಕಾರ್ಯಾಚರಣೆಯಲ್ಲಿ ತಾಸುಗಳೊಳಗಾಗಿ ಆತನನ್ನು ಪೊದೆಯೊಂದರಿಂದ ಪೊಲೀಸರು ಪತ್ತೆಹಚ್ಚಿದ ಘಟನೆ ನಡೆದಿದೆ.  ಕಾಸರಗೋಡು ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡ ಕ್ರೈಂ ನಂಬ್ರ 1245ದ ಪೋಕ್ಸೋ ಪ್ರಕರಣದ ಆರೋಪಿ ನೆಕ್ರಾಜೆ ಕೊರಕ್ಕಾನ ಶಿರೋ ನಿಲಯದ ಅಶ್ವತ್ಥ್ (19) ಪರಾರಿಯಾದ ಆರೋಪಿಯಾಗಿದ್ದಾನೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ನಂತರ ಆತನನ್ನು ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (1)ದಿಂದ ನಿನ್ನೆ ಪೊಲೀಸರು ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದರು. ಈ ಮಧ್ಯೆ ಆರೋಪಿಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಯ ಇನ್‌ವೆಸ್ಟಿಗೇಶನ್ ಕೊಠಡಿಗೆ ಸಾಗಿಸುತ್ತಿದ್ದ ವೇಳೆ ಎಸ್‌ಐಯ ಕೈಯಿಂದ ತಪ್ಪಿಸಿಕೊಂಡು ಆತ ಪರಾರಿಯಾಗಿದ್ದಾನೆ. ತಕ್ಷಣ ಇನ್ಸ್‌ಪೆಕ್ಟರ್‌ರ ನೇತೃತ್ವದಲ್ಲಿ ಕಾಸರಗೋಡಿನಾದ್ಯಂತ ವ್ಯಾಪಕ ಶೋಧ ನಡೆಸಿದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದಾಗ ನಿನ್ನೆ ಸಂಜೆ ಸುಮಾರು 4 ಗಂಟೆ ವೇಳೆಗೆ ನಗರದ ಆನೆಬಾಗಿಲಿನ ಪೊದೆಯೊಂದರಲ್ಲಿ ಅಡಗಿ ಕುಳಿತ ಸ್ಥಿತಿಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ  ಸಫಲರಾಗಿದ್ದಾರೆ. ಈತನನ್ನು ಪೊಲೀಸರು ಈಗ ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.

RELATED NEWS

You cannot copy contents of this page