ಕಾಸರಗೋಡು: ಬೇಳ ದರ್ಭೆತ್ತಡ್ಕದ ಪಿ. ಅಮರ್‌ನಾಥ್ ಹಾಗೂ ಕುಟುಂಬಕ್ಕೆ ಇದು ಸಂತೋಷದ ನಿಮಿಷ. ಪಾರಂಪರ್ಯವಾಗಿ ಲಭಿಸಿದ ಮಣ್ಣಿನಲ್ಲಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಭೂಹಕ್ಕು ಪತ್ರ ಅಥವಾ ಕೈವಶ ಹಕ್ಕು ಪತ್ರ ಇಲ್ಲದ ಕಾರಣ ಸ್ವಂತ ಭೂಮಿಗೆ ತೆರಿಗೆ ಪಾವತಿಸಲು ಅಥವಾ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಇವರಿಗೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಬಿದಿರಿನಿಂದ, ಬಳ್ಳಿಯಿಂದ ಬುಟ್ಟಿ ಹೆಣೆಯುವ ಪಾರಂಪರ್ಯ ಕೆಲಸದಲ್ಲಿ ಏರ್ಪಟ್ಟಿರುವ ಅಮರನಾಥ್ ತನ್ನ ದುಡಿಮೆಯಿಂದ ಕುಟುಂಬವನ್ನು ಸಲಹುತ್ತಿದ್ದು, ಭೂಮಿಯ ದಾಖಲೆ ಇಲ್ಲದಿದ್ದುದು ಬಹಳ ದೊಡ್ಡ ಚಿಂತೆಯಾಗಿ ಇವರನ್ನು ಕೊರೆಯುತ್ತಿತ್ತು. ಕುಟುಂಬಶ್ರೀಯ ಆನಿಮೇಟರ್ ಆಗಿ ಸೇವೆ ಸಲ್ಲಿಸುವ ಪತ್ನಿ ಡಿ. ಸುಮತಿ ಹಾಗೂ ನಾಲ್ಕು ಮಕ್ಕಳು ಸೇರಿದುದಾಗಿದೆ ಅಮರನಾಥ್‌ರ ಕುಟುಂಬ. ಓರ್ವೆಯ ವಿವಾಹ ಮಾಡಿಕೊಡಲಾಗಿದ್ದು, ಈಗ ಮೂರು ಮಕ್ಕಳು ಹಾಗೂ ತಂದೆ, ತಾಯಿ ದರ್ಭೆತ್ತಡ್ಕದಲ್ಲಿ ವಾಸವಾಗಿದ್ದಾರೆ. ಸ್ವಂತ ಮಣ್ಣಿಗೆ ಕಾನೂನು ಪರವಾದ ಹಕ್ಕು ಲಭಿಸಲು ಇವರ ಯತ್ನಕ್ಕೆ ಬೆಂಬಲ ನೀಡಿದ್ದು ಎಸ್‌ಟಿ ಪ್ರಮೋಟರ್ ಹಾಗೂ ಸ್ಥಳೀಯಾಡಳಿತ ಪ್ರತಿನಿಧಿಯಾದ ಶಂಕರರಾಗಿದ್ದಾರೆ. ಇವರ ನಿರಂತರ ಹಸ್ತಕ್ಷೇಪ, ಸಹಾಯದಿಂದಾಗಿ ವರ್ಷಗಳಿಂದ ಕಾಯುತ್ತಿದ್ದ ಭೂ ಹಕ್ಕು ಪತ್ರ ಅಮರನಾಥ್‌ರ ಕೈಗಳಿಗೆ ತಲುಪಿದೆ.







