ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹ ಊರಿಗೆ

ಬದಿಯಡ್ಕ: ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹವನ್ನು ಇಂದು ಮುಂಜಾನೆ ಊರಿಗೆ ತಲುಪಿಸಲಾಯಿತು. ಬದಿಯಡ್ಕ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ದಿ| ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40)ಯವರ ಮೃತದೇಹವನ್ನು ಇಂದು ಮುಂಜಾನೆ 3 ಗಂಟೆಗೆ ಮನೆಗೆ ತಲುಪಿಸಲಾಯಿತು. ಬಳಿಕ ಮಾನ್ಯ ಚುಕ್ಕಿನಡ್ಕದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅಂಗಮಾಲಿ ಕರೆಯಂಪರಂಬ್‌ನ ಇಂಡ್ಯನ್ ಮಲ್ಟಿಪಲ್ ಕೋ-ಓಪರೇಟಿವ್ ಸೊಸೈಟಿಯ ಬ್ರಾಂಚ್‌ನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ಅಚ್ಯುತಾನಂದ ಶೆಣೈ ಮೊನ್ನೆ ಬೆಳಿಗ್ಗೆ ಕಚೇರಿಗೆ ತಲುಪಿದ್ದರೆನ್ನ ಲಾಗಿದೆ. ಅನಂತರ ಹೊರಗೆ ತೆರಳಿದ ಇವರು ದೀರ್ಘ ಹೊತ್ತು ಕಳೆದರೂ ಮರಳಿ ಬಂದಿರಲಿಲ್ಲ. ಇದರಿಂದ ಅವರ ಸಹೋದ್ಯೋಗಿಗಳು ಮೊಬೈಲ್‌ಗೆ ಕರೆ ಮಾಡಿದಾಗ ತಿರುವನಂತಪುರದಿಂದ ತೃಶೂರಿಗೆ ತೆರಳುತ್ತಿದ್ದ ವೇನಾಡ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರೊಬ್ಬರು ಫೋನ್ ಎತ್ತಿದ್ದಾರೆ.

ಅಚ್ಯುತಾನಂದ ಶೆಣೈ ಮೊಬೈಲ್ ಫೋನ್ ಸೀಟಿನಲ್ಲಿರಿಸಿ ರೈಲಿನ ಬಾಗಿಲಿನ ಬಳಿ ಹೋಗಿರುವುದಾಗಿಯೂ ಬಳಿಕ ಅವರು ನಾಪತ್ತೆಯಾಗಿದ್ದಾರೆಂದು ವ್ಯಕ್ತಿ ತಿಳಿಸಿದ್ದರು. ಇದೇ ವೇಳೆ ರೈಲ್ವೇ ಹಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರು ರೈಲಿನಿಂದ ವ್ಯಕ್ತಿಯೊಬ್ಬರು ಹೊಳೆಗೆ ಬೀಳುವುದನ್ನು ಕಂಡಿದ್ದು, ಅವರು ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳ, ಪೊಲೀಸ್ ಸ್ಕೂಬಾ ಟೀಮ್ ಹೊಳೆಯಲ್ಲಿ ಶೋಧ ನಡೆಸಿದ ವೇಳೆ ನಿನ್ನೆ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಅಚ್ಯುತಾನಂದ ಶೆಣೈ ಹೊಳೆಗೆ ಬೀಳಲು ಕಾರಣವೇನೆಂದು ತಿಳಿದು ಬಂದಿಲ್ಲ. ಇವರ ಅಕಾಲಿಕ ಅಗಲುವಿಕೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮೃತರು ತಾಯಿ ರಮಾ ಶೆಣೈ, ಪತ್ನಿ ಅನುಷ್ಕ, ಸಹೋದರಿ ಗಾಯತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page