ಉಪ್ಪಳ: ಹೊಸಂಗಡಿಯ ವಸತಿಗೃಹದ ಕೊಠಡಿಗೆ ನುಗ್ಗಿ ಯುವಕ ಹಾಗೂ ಯುವತಿಯ ಅರೆನಗ್ನ ಫೋಟೋ, ವೀಡಿಯೋ ಚಿತ್ರೀಕರಿಸಿ ಹಲ್ಲೆಗೈದು ಬೆದರಿಕೆಯೊಡ್ಡಿದ ಪ್ರಕರಣ ದಲ್ಲಿ ಇನ್ನೋರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಹೋದ ಪೊಲೀಸರ ಮೇಲೆ ತಂಡವೊಂದು ಕಲ್ಲೆ ಸೆದು ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಕಲ್ಲೆಸೆತದಿಂದ ಇಬ್ಬರು ಪೊಲೀಸರು ಗಾಯಗೊಂ ಡಿದ್ದಾರೆ. ಘಟನೆಗೆ ಸಂಬಂಧಿಸಿ 8 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಚ್ಚಂಪಾಡಿ ನಿವಾಸಿ ಹೈದರಾಲಿ ಎಂಬಾತನನ್ನು ಕಸ್ಟಡಿಗೆ ತೆಗೆದಿರುವುದಾಗಿ ಪೊಲೀ ಸರು ತಿಳಿಸಿದ್ದಾರೆ. ಕಳೆದ ಜನವರಿ ೧೪ರಂದು ಮಧ್ಯಾಹ್ನ ಉಳ್ಳಾಲ ತಾಲೂಕಿನ ಕೈರಂಗಳ ನಿವಾಸಿ ಮುಹಮ್ಮದ್ ಹನೀಫ್ (41) ಹಾಗೂ ಈತನ ಸ್ನೇಹಿತೆಯಾದ ೩೧ರ ಹರೆಯದ ಯುವತಿ ಹೊಸಂಗಡಿಯ ವಸತಿಗೃಹದ ಕೊಠಡಿ ಯಲ್ಲಿದ್ದ ವೇಳೆ ಅಲ್ಲಿಗೆ ನುಗ್ಗಿ ಅವರಿಗೆ ಬೆದರಿಕೆಯೊಡ್ಡಿ ಅರೆನಗ್ನ ಫೋಟೋ, ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಹೈದರಲಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಘಟನೆ ಬಳಿಕ ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಇದೇ ವೇಳೆ ಈತ ನಿನ್ನೆ ರಾತ್ರಿ 11 ಗಂಟೆಗೆ ಮಚ್ಚಂಪಾ ಡಿಯ ಮನೆಯಲ್ಲಿರುವು ದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಎಸ್‌ಐ ಉಮೇಶ್ ಕೆ.ಆರ್ ನೇತೃತ್ವದ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಈ ವೇಳೆ ಹೈದರಲಿ ಮನೆ ಪರಿಸರದಿಂದ ಓಡಿ ಪರಾರಿಯಾಗಲೆತ್ನಿಸಿದ್ದನು. ಈ ವೇಳೆ ಪೊಲೀಸರು ಆತನನ್ನು ಬೆನ್ನಟ್ಟಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಳಿಕ ಈತನನ್ನು ಪೊಲೀಸರು ವಾಹನಕ್ಕೆ ಹತ್ತಿಸುತ್ತಿದ್ದ ವೇಳೆ ಆರೋಪಿಯ ಸಂಬಂಧಿಕರು ಸಹಿತ ತಂಡವೊಂದು ಪೊಲೀಸರಿಗೆ ಕಲ್ಲೆಸೆದು ಆರೋಪಿಯನ್ನು ಪೊಲೀಸರ ಕೈಯಿಂದ ಬಿಡಿಸಲು ಪ್ರಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲೆಸೆತದಿಂದ ಎಎಸ್‌ಐ ಸದನ್ ಹಾಗೂ ಮಹಿಳಾ ಪೊಲೀಸ್ ವಂದನ ಎಂಬಿವರು ಗಾಯಗೊಂಡಿದ್ದಾರೆ.
ಆರೋಪಿ ಪ್ರಸ್ತುತ ಕಸ್ಟಡಿಯಲ್ಲಿದ್ದು ಸಮಗ್ರ ತನಿಖೆ ಬಳಿಕ ಬಂಧನ ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಎಸ್‌ಐ ಉಮೇಶ್ ಕೆ.ಆರ್ ನೇತೃತ್ವದ ಪೊಲೀಸರ ತಂಡದಲ್ಲಿ ಎಸ್‌ಐಗಳಾದ ವೈಷ್ಣವ್ ರಾಮಚಂದ್ರನ್, ಶಬರೀಕೃಷ್ಣ, ಎಎಸ್‌ಐ ಸದನ್, ವಂದನ ಎಂಬಿವರಿದ್ದರು.
ಇದೇ ವೇಳೆ ಲಾಡ್ಜ್‌ನ ಕೊಠಡಿಯಲ್ಲಿ ಯುವಕ ಹಾಗೂ ಯುವತಿಗೆ ಬೆದರಿಕೆಯೊಡ್ಡಿ ವೀಡಿಯೋ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಮಂಜೇಶ್ವರ ಪಿರಾರಮೂಲೆಯ ಕೆ. ಹಾರಿಸ್ (40), ಬಡಾಜೆ ಕಾಜೂರುಮಾಲಿ ನಿವಾಸಿ ಟಿ.ಕೆ.ಮುಹಮ್ಮದ್ ಫೈಸಲ್ (43), ಹೊಸಬೆಟ್ಟು ನಿವಾಸಿ ಮೊಯ್ನುದ್ದೀನ್ ಸಮಾನ್ (33) ಎಂಬಿವರನ್ನು ಈ ಹಿಂದೆ ಬಂಧಿಸಲಾಗಿದೆ.






