ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಭಣಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಛಾ ತೈಲ ದರ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರದಂತೆ ತಡೆಯಲು ಕೇಂದ್ರ ಸರಕಾರ ಮಹತ್ತರ ಕ್ರಮ ಕೈಗೊಂಡಿದ್ದು ಇದರಂತೆ ಪೆಟ್ರೋಲ್ ಮತ್ತು ಡೀಸೆಲ್ ಇತ್ಯಾದಿ ಇಂಧನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ)ವನ್ನು ಕಡಿತಗೊಳಿಸಿದೆ. ಜಾಗತಿಕವಾಗಿ ತೈಲ ಪೂರೈಕೆ ಯಲ್ಲಿ ವ್ಯತ್ಯಯ ಉಂಟಾಗುವ ಆತಂಕವಿದ್ದರೂ ಇಂಧನಗಳ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರದ ಈ ಮಹತ್ತರ ತೀರ್ಮಾನದಿಂದಾಗಿ ಭಾರತದಲ್ಲಿ ತೈಲ ಬೆಲೆ ಸದ್ಯ ಸ್ಥಿರವಾಗಿರಲಿದೆ ಅಥವಾ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಈ ತೀರ್ಮಾನದ ಫಲವಾಗಿ ಪೆಟ್ರೋಲ್ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂ.ನಿಂದ 3 ರೂ.ನಷ್ಟು ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಲೀಟರ್‌ಗೆ 1.50 ರೂ.ನಷ್ಟು ಕಡಿತ ಗೊಳಿಸಲಾಗಿದೆ ಯೆಂದು ಕೇಂದ್ರ ಹಣಕಾಸುಸಚಿವಾಲಯದ ಮೂಲಗಳು ತಿಳಿಸಿವೆ. ಯುದ್ಧದ ಹಿನ್ನೆಲೆಯಲ್ಲಿ ಸಾರಿಗೆ ವೆಚ್ಚ ಹೆಚ್ಚದಂತೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ ತಡೆಗಟ್ಟಲು ಸರಕಾರ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಲಾಭಾಂಶವನ್ನು ಗ್ರಾಹಕರಿಗೆ ತಲುಪಿಸಲು ಹಾಗೂ ಕೃತಕ ಕ್ಷಾಮ ಸೃಷ್ಟಿಯಾಗದಂತೆ ನೋಡಿ ಕೊಳ್ಳಲು ತೈಲ ಸಂಸ್ಥೆಗಳಿಗೆ ಕೇಂದ್ರ ಸರಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.







