ಕಾಸರಗೋಡು: 32ನೇ ಸ್ವದೇಶಿ ಸಯನ್ಸ್ ಕಾಂಗ್ರೆಸ್ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ಇದರ ಅಂಗವಾಗಿ ವಿಕಸಿತ್ ಭಾರತ್‌ಗಾಗಿ ಪರಿವರ್ತಕ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಎಂಬ ವಿಷಯದಲ್ಲಿ ಆರಂಭಗೊಂಡ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಖರ್ ಉದ್ಘಾಟಿಸಿದರು. ವಿಶ್ವವಿದ್ಯಾನಿಲಯದ ಲೈಬ್ರೆರಿ ಸಭಾಂಗಣದಲ್ಲಿ ಆರಂಭಗೊಂಡ ವಿಚಾರಗೋಷ್ಠಿಯಲ್ಲಿ ಕೇಂದ್ರೀಯ ವಿ.ವಿ ಉಪಕುಲಪತಿ ಪ್ರೊ| ಸಿದ್ದು ಪಿ. ಅಲ್ಗೂರ್ ಅಧ್ಯಕ್ಷತೆ ವಹಿಸಿದರು. ವಿಜ್ಞಾನಭಾರತಿ ಕಾರ್ಯದರ್ಶಿ ಜನರಲ್ ವಿವೇಕಾನಂದ ಪೈ ಮುಖ್ಯ ಅತಿಥಿಯಾಗಿ ದ್ದರು. ವಿಜ್ಞಾನ ವಲಯದಲ್ಲಿ ಸಮಗ್ರ ಕೊಡುಗೆ ನೀಡಿದವರಿಗಾಗಿರುವ ಸ್ವದೇಶಿ ವಿಜ್ಞಾನ ಪುರಸ್ಕಾರವನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು. ವಿವಿಧ ವಲಯಗಳ ಆಧಾರಿತ ಪ್ರಬಂಧ ಮಂಡನೆ, ಚರ್ಚೆ, ಉಪನ್ಯಾಸ, ಸಂವಾದಗಳು ನಡೆಯಲಿದೆ. ಆರು ವೇದಿಕೆಗಳಲ್ಲಾಗಿ 19 ವಿಚಾರಗೋಷ್ಠಿಗಳು ನಡೆಯಲಿವೆ. ಇದರಲ್ಲಿ ಅತ್ಯುತ್ತಮ ಪ್ರಬಂಧ ಮಂಡಿಸುವವರಿಗೆ ಯುವ ವಿಜ್ಞಾನ ಪುರಸ್ಕಾರ, ಅತ್ಯುತ್ತಮ ಮೌಖಿಕ ಪ್ರಸ್ತುತಿ ಮತ್ತು ಅತ್ಯುತ್ತಮ ಪೋಸ್ಟರ್ ಪ್ರಸ್ತುತಿಗಳಿಗೆ ತಲಾ 20ರಂತೆ ಪುರಸ್ಕಾರಗಳನ್ನು ವಿತರಿಸಲಾಗುವುದು. ವಿಜ್ಞಾನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದವೂ ನಡೆಯಲಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ ಡಿಸಿಪ್ಲಿನರಿ ಸಯನ್ಸ್ ಆಂಡ್ ಟೆಕ್ನಾಲಜಿ ನಿರ್ದೇಶಕ ಡಾ. ಸಿ. ಅನಂತರಾಮಕೃಷ್ಣನ್, ಕೇರಳ ವಿ.ವಿ. ಉಪಕುಲಪತಿ ಪ್ರೊ| ಮೋಹನನ್ ಕುನ್ನುಮಲ್ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಭಾರತೀಯ ಜ್ಞಾನಪರಂಪರೆ ಎಂಬ ವಿಷಯದಲ್ಲಿ ಅಮೃತ್ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಸಯನ್ಸ್‌ನ ಡೀನ್ ಹಾಗೂ ನಿರ್ದೇಶಕರೂ ಆಗಿರುವ ಪ್ರೊಫೆಸರ್ ಕೃಷ್ಣ ಕುಮಾರ್ ಭಾಷಣ ಮಾಡುವರು. ವಿಚಾರ ಸಂಕಿರಣ ಜನವರಿ ೯ರಂದು ಸಮಾಪ್ತಿಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ| ಅಶೋಕ್ ಎಸ್. ಆಳೂರು ಪ್ರಧಾನ ಭಾಷಣ ಮಾಡುವರು. ಸ್ವದೇಶಿ ವಿಜ್ಞಾನ ಸಂಘಟನೆ ಕೇರಳ ಇದರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.







