ಕಾಸರಗೋಡು: ಅಚ್ಚ ಕನ್ನಡ ಪ್ರದೇಶವಾಗಿದ್ದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳು ನಾಶವಾಗುತ್ತಿರುವಾಗ ಕನ್ನಡಿಗರು ಮೌನ ವಹಿಸಿದರೆ ಮುಂದೆ ಕನ್ನಡ ಹುಡುಕಿ ದರೂ ಸಿಗದ ಸ್ಥಿತಿ ನಿರ್ಮಾಣವಾಗಲಿದೆ ಯೆಂಬ ಪ್ರಜ್ಞೆ ಹಿನ್ನೆಲೆಯಲ್ಲಿ ಹಿರಿಯರು ನಡೆಸುತ್ತಿದ್ದ ಪ್ರತಿಭಟನೆಗೆ ಮರುಜೀವ ನೀಡಲು ತೀರ್ಮಾನಿಸಲಾಗಿದೆ.
1956 ನವಂಬರ್ ಒಂದರಂದು ಭಾಷಾವಾರು ಪ್ರಾಂತ್ಯ ರಚನೆಯಿಂದಾಗಿ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿದ್ದು ಇತಿಹಾಸವಾದರೂ ಆ ಬಳಿಕ ಕನ್ನಡದ ಅವನತಿಗೆ ಆರಂಭವಾಗಿತ್ತು. ಇದರ ವಿರುದ್ಧ ಕೆಲವು ವರ್ಷದ ಹಿಂದೆವರೆಗೆ ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ ಮೊದಲಾದ ಮುಂದಾಳುಗಳ ನೇತೃತ್ವದಲ್ಲಿ ಪ್ರತಿ ವರ್ಷ ನವಂಬರ್ 1ರಂದು ಕಾಸರಗೋಡಿನ ಕನ್ನಡಿಗರು ಕರಾಳ ದಿನವಾಗಿ ಆಚರಿಸುತ್ತಿದ್ದರು. ಇದರಿಂದ ಕನ್ನಡದ ಬಗ್ಗೆ ನಾಲ್ಕು ಮಂದಿ ತಿಳಿದುಕೊಳ್ಳಲಾದರೂ ಸಹಾಯಕ ವಾಗುತ್ತಿದ್ದರೆ ಈಗ ಆ ಪ್ರತಿಭಟನೆಯೂ ನಿಂತು ಕನ್ನಡಿಗರು ಎಂದರೆ ‘ಅದೇನು?’ ಎಂಬ ಸ್ಥಿತಿ ಕಾಸರಗೋಡಿನಲ್ಲಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಉಳಿಸಲು ಏನು ಮಾಡಬಹುದು ಎಂಬ ಬಗ್ಗೆ ಚಿಂತಿಸಲು ಈ ತಿಂಗಳ 12ರಂದು ಬೆಳಿಗ್ಗೆ 10ಕ್ಕೆ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಕರ್ನಾಟಕ ಸಮಿತಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರಿವಾರ ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ಕರ್ನಾಟಕ ಗಮಕ ಕಲಾ ಪರಿಷತ್ತು ಕಾಸರಗೋಡು ಅಧ್ಯಕ್ಷ ತೆಕ್ಕೇಕರೆ ಶಂಕರನಾರಾಯಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.