ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾದ ನೀರು ತುಂಬಿದ ಹೊಂಡದಲ್ಲಿ ವಲಸೆ ಕಾರ್ಮಿಕನೋರ್ವ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾಸರಗೋಡು ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡದ ಗ್ರೌಂಡ್ ಫ್ಲೋರ್ನಲ್ಲಿ ಲಿಫ್ಟ್ ನಿರ್ಮಾಣಕ್ಕೆಂದು ತೋಡಲಾದ ಹೊಂಡದಲ್ಲಿ ನಿನ್ನೆ ರಾತ್ರಿ ಸುಮಾರು 11.30ರ ವೇಳೆ ಮೃತದೇಹ ಕಂಡುಬಂದಿದೆ. ಆ ಬಗ್ಗೆ ಪ್ರಸ್ತುತ ಕಟ್ಟಡದ ಮಾಲಕನ ಪುತ್ರ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತ ವ್ಯಕ್ತಿ ಸುಮಾರು 25-30ರ ಮಧ್ಯೆ ಪ್ರಾಯದ ಯುವಕನಾಗಿದ್ದಾನೆ. ಮೃತದೇಹ ಪತ್ತೆಯಾದ ತಕ್ಷಣ ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸತೀಶನ್ ಬಿ.ಎಂ ನೇತೃತ್ವದ ಇತರ ಸಿಬ್ಬಂದಿಗಳಾದ ಗೋಕುಲ್, ಸಾಬಿತ್, ಅತುಲ್ರವಿ, ಪ್ರಜಿತ್ ಒ.ಕೆ, ಜಿಜೋ ಮತ್ತು ಶ್ರೀಜಿತ್ ಎಂಬಿವರನ್ನೊಳಗೊಂಡ ತಂಡ
ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊಂಡದಿಂದ ಮೇಲಕ್ಕೆತ್ತಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಂತರ ಪೊಲೀಸರು ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಮೃತದೇಹದಲ್ಲಿ ಹಲವು ಗಾಯಗಳು ಪತ್ತೆಯಾಗಿವೆ. ಇವರನ್ನು ಯಾರೋ ಹೊಡೆದು ಕೊಲೆಗೈದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮೃತದೇಹವನ್ನು ಎಳೆದುಕೊಂಡು ಹೋಗಿ ಹೊಂಡಕ್ಕೆ ತಳ್ಳಿಹಾಕಿದ ರೀತಿಯ ರಕ್ತದ ಕಲೆಗಳು ಪತ್ತೆಯಾಗಿವೆ. ಆ ಜಾಗದಲ್ಲಿ ಮಂಜುನಾಥ್ ಕೆ.ಎನ್, ಕೆ.ಎನ್. ನಾಗೇಂದ್ರಪ್ಪರ ಪುತ್ರ, ೦೯ ಶ್ರೀನಿವಾಸ್ ಬಿಲ್ಡಿಂಗ್, ಶಿವಮ್ಮ ಹೋಟೆಲ್ ಸಮೀಪ, ನೆಲಗದರನಹಳ್ಳಿ, ದಾಸರಹಳ್ಳಿ, ಬಿಟಿಸಿ ಬೆಂಗಳೂರು ನೋರ್ತ್ ಎಂಬ ವಿಳಾಸದ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆದ್ದರಿಂದ ಇದು ಮೃತವ್ಯಕ್ತಿಯ ಆಧಾರ್ ಕಾರ್ಡ್ ಆಗಿದೆಯೇ ಅಥವಾ ಬೇರೆ ಯಾರದ್ದಾದರೂ ಆಗಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಇದು ಕೊಲೆಯೇ ಎಂಬ ಬಗ್ಗೆ ಖಚಿತಪಡಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.






