ಸೋಷ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಚಿನ್ನು ಪಾಪು ಸಾವಿನ ಬೆನ್ನಲ್ಲೇ ಸ್ನೇಹಿತ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸೋಶ್ಯಲ್ ಮೀಡಿಯಾ  ಇನ್‌ಫ್ಲುವೆನ್ಸರ್ ಚಿನ್ನು ಪಾಪು ಯಾನೆ ರೇಷ್ಮ (24)ರ ಸ್ನೇಹಿತ  ಸಂದೇಶ್ (28)ರ ಸಾವು  ನೇಣು ಬಿಗಿದು  ಸಂಭವಿಸಿರುವುದಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ  2.30 ರ ವೇಳೆ ಸಂದೇಶ್ ಕೂಡ್ಲು ಮನ್ನಿಪ್ಪಾಡಿಯಲ್ಲಿರುವ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  

ಸಂದೇಶ್‌ರ ಸ್ನೇಹಿತೆ ಆದೂರು ಆಲಂತಡ್ಕದ ಚಿನ್ನು ಪಾಪು ಯಾನೆ ರೇಷ್ಮ (24) ಫೆ. 9ರಂದು ಮಧ್ಯಾಹ್ನ ಕೂಡ್ಲು ಆಜಾದ್ ನಗರದಲ್ಲಿರುವ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಪ್ರಕರಣದ ತನಿಖೆಯಂಗವಾಗಿ  ಸಂದೇಶ್‌ನನ್ನು ಕಾಸರಗೋಡು ನಗರಠಾಣೆ ಪೊಲೀಸರು ಕಸ್ಟಡಿಗೆ ತೆಗೆದು ಹೇಳಿಕೆ ದಾಖಲಿಸಿ ಬಿಡುಗಡೆಗೊಳಿಸಿದ್ದರು. ಇದರ ಬೆನ್ನಲ್ಲೇ ಸಂದೇಶ್ ವಿರುದ್ಧ ಭಾರೀ ಸೈಬರ್ ದಾಳಿ ನಡೆದಿರುವುದಾಗಿ ಹೇಳಲಾಗುತ್ತಿದೆ. ಇದರಿಂದ ಮನನೊಂದು ಸಂದೇಶ್ ನೇಣು ಬಿಗಿದು ಸಾವಿಗೀಡಾಗಿರುವುದಾಗಿ ಸಂಶಯಿಸಲಾಗುತ್ತಿದೆ. ಇದೇ ವೇಳೆ ರೇಷ್ಮ ಆತ್ಮಹತ್ಯೆಗೈಯ್ಯಲು ಕಾರಣ ವೇನೆಂದು ತಿಳಿದುಬಂದಿಲ್ಲ.  ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

 ನಾರಾಯಣ ನಾಯ್ಕ್-ಸರೋಜ ದಂಪತಿಯ ಪುತ್ರನಾದ ಸಂದೇಶ್ ಸಹೋದರಿ ಗೌತಮಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page