ಕಾಸರಗೋಡು: ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಯ ವಿರುದ್ಧ ಕಾಸರಗೋಡಿನ ಕನ್ನಡಿಗರು ಮತ್ತು ಕನ್ನಡ ಸಂಘಟ ನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲು ಸಿದ್ಧತೆ ಅಂತಿಮ ಹಂತದಲ್ಲಿದೆ.
ಈ ಮಸೂದೆಯು ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ. ಮಸೂದೆಯಲ್ಲಿರುವ ವಿಧಿಗಳು ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವಾಗಿದ್ದು, ಕನ್ನಡ ಭಾಷೆಯ ಬಳಕೆ ಮತ್ತು ಅಭಿವೃದ್ದಿಗೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಈ ಕುರಿತು ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಈಗಾಗಲೇ ಎರಡು ಸಭೆಗಳನ್ನು ನಡೆಸಿ, ಮಸೂದೆಯ ಲೋಪದೋಷಗಳ ಬಗ್ಗೆ ಚರ್ಚಿಸಿ ದ್ದಾರೆ. ಎರಡನೇ ಸಭೆಯಲ್ಲಿ ಕಾನೂನು ಹೋರಾಟ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.
ತಜ್ಞರ ಸಮಿತಿಯು ಮಸೂದೆ ಯನ್ನು ಪರಿಶೀಲಿಸಿ ಇದು ಸಂವಿಧಾನ ವಿರೋಧಿ ಹಾಗೂ ಭಾಷಾ ಅಲ್ಪ ಸಂಖ್ಯಾತರ ಹಕ್ಕುಗಳಿಗೆ ಚ್ಯುತಿ ತರುವಂತದ್ದು ಎಂದು ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲು ಎಲ್ಲಾ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ದಾವೆ ಹೂಡಲು ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಸಮಿತಿಯ ಅಧ್ಯಕ್ಷ ಕೆ. ಮುರಳೀಧರ ಬಳ್ಳುಕ್ಕರಾಯ ರ ಅಧ್ಯಕ್ಷತೆಯಲ್ಲಿ ಕಾಸರಗೋಡಿನಲ್ಲಿ ನಡೆದ ತಜ್ಞ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಹೆಜ್ಜೆಯಾಗಿ ದಾವೆ ಹೂಡುವ ಪ್ರಕ್ರಿಯೆಗೆ ಚಾಲನೆ ಕೊಡಲಾಗಿದೆ. ಸಭೆಯಲ್ಲಿ ನಿವೃತ್ತ ನ್ಯಾಯಾಧೀಶ ರಾಜಕುಮಾರ ಎಂ.ವಿ, ನಿವೃತ್ತ ಡಿ.ಇ.ಒ, ನ್ಯಾಯವಾದಿ ಎನ್.ಕೆ ಮೋಹನ್ ದಾಸ್, ನ್ಯಾಯವಾದಿ ಸತ್ಯನಾರಾಯಣ ತಂತ್ರಿ, ನಿವೃತ್ತ ಡಿ.ಡಿ.ಇ ಮಹಾಲಿಂಗೇಶ್ವರ ರಾಜ್ .ಡಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್.ಎ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಗಮಕ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ,ಲೋಕ ಸೇವಾ ಆಯೋಗದ ನಿವೃತ್ತ ಅಧೀನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಣೂರು ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಕನ್ನಡ ಪರ ಸಂಘಟನೆಗಳು ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.







