ಮಂಜೇಶ್ವರ: ಕಾಸರಗೋಡು, ಮಂಜೇಶ್ವರ ವಿಧಾನಸಭಾ ಮಂಡಲಗಳ ಬೂತ್ಗಳ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಭೇಟಿ ನೀಡಿ ಮೌಲೀಕರಣ ನಡೆಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಇಲೆಕ್ಟ್ರೋನಿಕ್ ಮತಯಂತ್ರಗಳು, ವಿ.ವಿ.ಪ್ಯಾಟ್ಗಳನ್ನು ಇರಿಸಿರುವ ಭದ್ರತಾ ಕೊಠಡಿಯನ್ನು ಜಿಲ್ಲಾಧಿಕಾರಿ ಸಂದರ್ಶಿಸಿದರು. ರಾಜ್ಯದ ಒಂದನೇ ನಂಬ್ರ ಬೂತ್ ಆಗಿರುವ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಬೂತ್ಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಮಂಜೇಶ್ವರ ಮಂಡಲದ ಸೂಕ್ಷ್ಮ ಬೂತ್ ಆದ ಕಣ್ವತೀರ್ಥ ಸರಕಾರಿ ಎಲ್ಪಿ ಶಾಲೆಯ ಮತಗಟ್ಟೆಯನ್ನು ಕೂಡಾ ಜಿಲ್ಲಾಧಿಕಾರಿ ಸಂದರ್ಶಿಸಿದರು. ಮಂಜೇಶ್ವರ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿದರು. ತಹಶೀಲ್ದಾರ್ ಪಿ. ಪ್ರೇಮ್ರಾಜ್, ಸೆಕ್ಟರಲ್ ಆಫೀಸರ್ ಹಾರಿಸ್ ಜೊತೆಗಿದ್ದರು. ಕಾಸರಗೋಡು ಮಂಡಲದ ಸೂಕ್ಷ್ಮ ಮತಗಟ್ಟೆಯಾದ ಆಲಂಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಚೆರ್ಕಳ ಸೆಂಟ್ರಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಎಲ್ಲಾ ಮತಗಟ್ಟೆಗಳಲ್ಲೂ ಮೂಲಭೂತ ಸೌಕರ್ಯಗಳನ್ನು ಸಿದ್ಧಪಡಿಸಲಾಗಿದೆ. ಭಾಷಾ ಅಲ್ಪ ಸಂಖ್ಯಾತ ವಲಯಗಳಲ್ಲಿ ಕನ್ನಡದಲ್ಲೂ ಮಾಹಿತಿಗಳನ್ನು ಲಭ್ಯಗೊಳಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.






