ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ನಿನ್ನೆ ಬಿಡುಗಡೆಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್ ನವೀನ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಪಕ್ಷದ ಹಿರಿಯ ನಾಯಕರ ಸಮಕ್ಷಮದಲ್ಲಿ ಈ ಪ್ರಣಾಳಿಕೆ ಬಿಡುಗಡೆಮಾಡ ಲಾಯಿತು.
ಪ್ರಣಾಳಿಕೆಯಲ್ಲಿ ಹಲವು ಕೊಡುಗೆಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಮುಖ ಅಂಶಗಳು ಇಂತಿವೆ: ಅರ್ಹ ಕುಟುಂಬಗಳಿಗೆ ವಾರ್ಷಿಕ ಎರಡು ಉಚಿತ ಎಲ್ಪಿಜಿ ವಿತರಣೆ, ಕುಟುಂಬಗಳಿಗೆ ದಿನಸಿ ಮತ್ತು ಔಷಧಿ ಖರೀದಿಗೆ ತಿಂಗಳಿಗೆ 2500 ರೂ. ಮೊತ್ತದ ರೀಚಾರ್ಜ್ ಕಾರ್ಡ್, ರಾಜ್ಯದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ, ಬಡ ಮಹಿಳೆಯರು, ವಿಧವೆಯರು ಮತ್ತು 70ಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ 3000 ರೂ. ಪಿಂಚಣಿ ವಿತರಣೆ, ಓಣಂ ಮತ್ತು ಕ್ರಿಸ್ಮಸ್ ವೇಳೆ ಎರಡು ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, ಪ್ರತೀ ಮನೆಗಳಿಗೆ ಮಾಸಿಕ 20000 ಲೀಟರ್ ಉಚಿತ ನೀರು, ಶಬರಿಮಲೆ, ಗುರುವಾ ಯೂರು ಸೇರಿ ಎಲ್ಲಾ ದೇಗುಲಗಳ ಅಭಿವೃದ್ಧಿ, ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಬಗ್ಗೆ ಕಾಲಮಿತಿ ಯೊಳಗಾಗಿ ತನಿಖೆ ಪೂರ್ಣ ಗೊಳಿಸುವಿಕೆ ಮತ್ತು ತಿರುವನಂತಪುರ-ಕಣ್ಣೂರು ಸಂಪರ್ಕಿಸುವ ಹೈಸ್ಪೀಡ್ ರೈಲು ಸೇವೆ ಇತ್ಯಾದಿ ಕೊಡುಗೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.
ಇದರ ಹೊರತಾಗಿ ಭ್ರಷ್ಟಾಚಾರ ಹಾಗೂ ಬಡತನಮುಕ್ತ ಸುರಕ್ಷಿತ ಸ್ವಾವಲಂಬಿತ ಕೇರಳ, ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ಸಾಲದ ಕೂಪದಿಂದ ಕೇರಳವನ್ನು ಮುಕ್ತಗೊಳಿಸಿ ಆರ್ಥಿಕ ಬೆಳವಣಿಗೆ ಹೊಂದಿದ ರಾಜ್ಯವನ್ನಾಗಿ ಮಾರ್ಪಡಿಸುವಿಕೆ, ಪ್ರತೀ ಪೌರನಿಗೆ ತಲೆ ಎತ್ತಿ ನಿಂತು ಜೀವಿಸುವಂತೆ ಮಾಡುವ ಕೇರಳವನ್ನು ಸೃಷ್ಟಿಸಲಾಗುವುದು. ಕನಿಷ್ಠ ಬಡ್ಡಿದರದಲ್ಲಿ ಒಂದು ಲಕ್ಷ ರೂ. ತನಕ ಸಾಲ ವಿತರಣೆ, ಎಂಪ್ಲೋಯ್ ಮೆಂಟ್ ಲಿಂಕ್ಡ್ ಇನ್ಸೆಂಟೀವ್ ಸ್ಕೀಂ,ಜನರ ಆರೋಗ್ಯ ಸಂರಕ್ಷಣೆಗಾಗಿ ವಿಶೇಷ ಯೋಜನೆ, ಎಲ್ಲಾ ಪಂಚಾಯತ್ ಗಳಲ್ಲೂ ಸಂಚಾರಿ ಆಸ್ಪತ್ರೆ ಸೇವೆ, ದೈನಂದಿನ 24 ತಾಸುಗಳ ತನಕವೂ ಉಚಿತ ಆಂಬುಲೆನ್ಸ್ ಸೇವೆ, ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಎಲ್ಲಾ ಕೇರಳೀಯರಿಗೆ ಲಭಿಸುವಂತೆ ಮಾಡುವುದು ಇತ್ಯಾದಿ ಭರವಸೆ ಗಳನ್ನು ಬಿಜಿಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.






