ಚುನಾವಣೆ: ಇನ್ನು ಸೋಲು ಗೆಲುವಿನ ಲೆಕ್ಕಾಚಾರ

ತಿರುವನಂತಪುರ: 16ನೇ ಕೇರಳ ವಿಧಾನಸಭೆಗಾಗಿರುವ ಮತದಾನ ನಿನ್ನೆ ಅತ್ಯಂತ ಶಾಂತಯುತವಾಗಿ ನಡೆದಿದೆ. 1987ರ ಬಳಿಕ ಅತೀ ಹೆಚ್ಚು ಮಂದಿ ಮತಚಲಾಯಿಸಿದ ವಿಶೇಷತೆಯೂ ನಿನ್ನೆ ನಡೆದ ಚುನಾವಣೆ ಹೊಂದಿದೆ. 2021ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ  ಶೇ. 76ರಷ್ಟು ಮತದಾನ ನಡೆದರೆ ಈ ಬಾರಿ ಅದು ಶೇ. 79.27ಕ್ಕೇರಿರುವುದು ಅದು ಈಗಿನ ಆಡಳಿತ ಒಕ್ಕೂಟವಾದ ಎಡರಂಗ, ವಿರೋಧ ಪಕ್ಷವಾದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಯಲ್ಲಿ ಸಮಾನವಾಗಿ ಗೆಲುವಿನ ಬಾರೀ ನಿರೀಕ್ಷೆ ಮೂಡಿಸುವಂತೆ ಮಾಡಿದೆ.

ಮತಎಣಿಕೆ ಮೇ 4ರಂದು ನಡೆಯಲಿದ್ದು, ಆ ತನಕ ಎಲ್ಲಾ ರಾಜಕೀಯ ಪಕ್ಷಗಳು ಈಗ ಸೋಲು ಗೆಲುವಿನ ಲೆಕ್ಕಾಚಾರಗಳಲ್ಲಿ ತೊಡಗಿವೆ. ಈ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಹೋಗಿ ಸೇರಲಿದೆ ಎಂಬುವುದು ಮೇ ೪ರಂದು ನಿರ್ಧಾರವಾಗಲಿದೆ.

ಗರಿಷ್ಠ ಮಟ್ಟದ ಮತದಾನ ನಡೆದಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಎಡರಂಗ ಗರಿಷ್ಠ ಸ್ಥಾನ ಗಳಿಸಿ ಸತತ ಮೂರನೇ ಬಾರಿ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರೆ, ನಾವು 100ಕ್ಕೂ ಹೆಚ್ಚು ಸ್ಥಾನ ಗೆದ್ದು  ಅಧಿಕಾರಕ್ಕೇರುವೆವು ಎಂಬ ಈ ಹಿಂದಿನ ಅಭಿಪ್ರಾಯವನ್ನು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಮರುಕಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇನ್ನೊಂದೆಗೆ ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಅನಿರೀಕ್ಷಿತವಾದ ರೀತಿಯ ಗೆಲುವು ಸಾಧಿಸಲಿದೆ. ಆ ಮೂಲಕ ಕೇರಳದಲ್ಲಿ ಸ್ಪಷ್ಟಬಹುಮತದೊಂದಿಗೆ ಆಡಳಿತ ನಡೆಸಲು ಯಾರಿಗೂ ಸಾಧ್ಯವಾಗದ ರೀತಿಯ ತ್ರಿಶಂಕು ಸ್ಥಿತಿ ನಿರ್ಮಾಣವಾಗಲಿದೆಯೆಂದು  ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

2021ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳಲ್ಲಿ ಎಡರಂಗ 99 ಸ್ಥಾನಗಳನ್ನು ಗಳಿಸಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಸತತ ಎರಡನೇ ಬಾರಿಗೆ ಕೇರಳದಲ್ಲಿ ಗದ್ದುಗೆಗೇರಿತ್ತು. ಯುಡಿಎಫ್‌ಗೆ 41 ಸ್ಥಾನ ಮಾತ್ರವೇ ಲಭಿಸಿ ವಿರೋಧ ಪಕ್ಷ ಸ್ಥಾನದಲ್ಲಿ ಸತತ ಎರಡು ಬಾರಿ ಕುಳಿತುಕೊಳ್ಳಬೇಕಾಗಿ ಬಂತು. ಬಿಜೆಪಿ ನೇತೃತ್ವದ ಎನ್‌ಡಿಎ ಸಂಪಾದನೆ ಶೂನ್ಯವಾಗಿತ್ತು. ಕಳೆದ ಬಾರಿ 2021 ಎಪ್ರಿಲ್ ೬ಕ್ಕೆ ಚುನಾವಣೆ ನಡೆದು ಮೇ 2ರಂದು ಫಲಿತಾಂಶ ಹೊರಬಂದಿತ್ತು. 16ನೇ ಕೇರಳ ವಿಧಾನಸಭೆಗಾಗಿರುವ ಚುನಾವಣೆ ನಿನ್ನೆ ನಡೆದಿದ್ದು, ಮೇ ೪ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

You cannot copy contents of this page