ಕುಂಬಳೆ: ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಆಶ್ರಯದಲ್ಲಿ ಸೌರ ಶಕ್ತಿ ನಿರ್ಮಿತ ಇಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಗೆ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಸಹಕಾರಿ ವಲಯದಲ್ಲಿ ಚಾರ್ಜಿಂಗ್ ಸ್ಟೇಶನ್ ಇದೇ ಪ್ರಥಮವಾಗಿದ್ದು, ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಅಧೀನದಲ್ಲಿರುವ ಕುಂಬಳೆ, ಚೆಂಗಳ, ಮುಳ್ಳೇರಿಯ ಎಂಬ ಮೂರು ಆಸ್ಪತ್ರೆಗಳಲ್ಲೂ ಸೋಲಾರ್ ಇಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಲಾಗಿದೆ. ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ 35 ಕೆಡಬ್ಲ್ಯುಪಿ ವೇಗದ, 37 ಕೆಡಬ್ಲ್ಯುಡಿಸಿ ಚಾರ್ಜಿಂಗ್ ಯಂತ್ರಗಳಿದ್ದು, ಚೆಂಗಳದ ಆಸ್ಪತ್ರೆಯಲ್ಲಿ 115 ಕೆಡಬ್ಲ್ಯುಪಿ, 67 ಕೆಡಬ್ಲ್ಯುಡಿಸಿ ವೇಗದ ಹಾಗೂ ಮುಳ್ಳೇರಿಯದಲ್ಲಿ 60 ಕೆಡಬ್ಲ್ಯುಪಿ, 37 ಕೆಡಬ್ಲ್ಯುಡಿಸಿ ಚಾರ್ಜಿಂಗ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಕಾರು, ದ್ವಿಚಕ್ರ ವಾಹನ, ಆಟೋ ರಿಕ್ಷಾಗಳನ್ನು ಚಾರ್ಜ್ ಮಾಡಬಹುದಾಗಿದೆ. ಈ ಇವಿ ಚಾರ್ಜಿಂಗ್ ಯಂತ್ರಗಳನ್ನು ಕೊಯಂಬತ್ತೂರು ಕೇಂದ್ರವಾಗಿ ಕಾರ್ಯಾಚರಿಸುವ ಟೆಕ್ ಆಂಡ್ ಎನರ್ಜಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿದೆ.







