ಬದಿಯಡ್ಕ: ರಸ್ತೆ ಅಡ್ಡ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಕೃಷಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರಡಾಲ ಬೋಳುಕಟ್ಟೆ ಅನುಗ್ರಹ ಕಾಂಪ್ಲೆಕ್ಸ್‌ನಲ್ಲಿ ವಾಸಿಸುವ ಚಂಬಲ್ತಿಮಾರು ತರವಾಡು ಮನೆಯ ಸಿ. ಗೋಪಾಲಕೃಷ್ಣ ಭಟ್ (74) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 7.15ರ ವೇಳೆ ಅಪಘಾತ ಸಂಭವಿಸಿದೆ. ಮನೆಗೆ ಹೋಗಲು ಬೋಳುಕಟ್ಟೆ ಸಮೀಪ ರಸ್ತೆ ಅಡ್ಡ ದಾಟುತ್ತಿದ್ದ ವೇಳೆ ಮುಳ್ಳೇರಿಯ ಭಾಗದಿಂದ ಅಪರಿಮಿತ ವೇಗದಲ್ಲಿ ಬಂದ ಕಾರು ಇವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಗೋಪಾಲಕೃಷ್ಣ ಭಟ್‌ರನ್ನು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು.
ಅಪಘಾತಕ್ಕೆ ಸಂಬಂಧಿಸಿ ಆದಿತ್ಯ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಮೃತರು ಪತ್ನಿ ವೈಜಯಂತಿ, ಮಕ್ಕಳಾದ ಶ್ರೀಲಕ್ಷ್ಮಿ, ಶ್ರೀವಿದ್ಯಾ, ಅಳಿಯಂದಿರಾದ ಮನು ಶರ್ಮ, ವಿನೋದ್ ಕುಮಾರ್, ಸಹೋದರ-ಸಹೋದರಿಯರಾದ ಮಹಾಬಲೇಶ್ವರ ಭಟ್, ಗಣರಾಜ ಭಟ್, ರಾಜೇಶ್ವರಿ, ಪುಷ್ಪಲತಾ, ವಿಜಯಲತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.







