ತಂದೆಯನ್ನು ಕೊಲೆಗೈದ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡ ಆರೋಪಿ ಸೆರೆ

ಮುಳ್ಳೇರಿಯ: ತಂದೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಅಡೂರಿಗೆ ಸಮೀಪದ ಪಾಂಡಿ ವಳ್ಳಿರಿಕಯ ನಿವಾಸಿ ನರೇಂದ್ರ ಪ್ರಸಾದ್ (28) ಬಂಧಿತ ಆರೋಪಿ.

2022 ಎಪ್ರಿಲ್ 5ರಂದು ತಂದೆ ಬಾಲಕೃಷ್ಣ ನಾಯ್ಕರನ್ನು ಹೊಡೆದು ಕೊಲೆಗೈದ ಆರೋಪದಂತೆ ನರೇಂದ್ರ ಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಗೆ ಆ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆ ಬಳಿಕ ಆತ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಆತ  ಮನೆಗೆ ಹಿಂತಿರುಗಿದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರ ಜಾಡು ಹಿಡಿದು ಆದೂರು ಪೊಲೀಸ್ ಠಾಣೆಯ ಎಸ್‌ಐ ಎಂ. ಸುಜಿಲೇಶ್‌ರ ನೇತೃತ್ವದ ಪೊಲೀಸರು ಆ ಮನೆಗೆ ಸಾಗಿ ಅಲ್ಲಿಂದ ಆತನನ್ನು ಬಂಧಿಸಿದ್ದಾರೆ. ಬಂಧಿತನನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page