ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ

ಕಾಸರಗೋಡು: ಪುಸ್ತಕವೆಂಬ ಜ್ಞಾನದ ಬೆಳಕನ್ನು ಪಸರಿಸುವ ಮೂಲಕವೇ ಉದ್ಘಾಟನೆಗೊಂಡ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ ಎಂದು  ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಸರಗೋಡಿನಲ್ಲಿ ಶುದ್ಧವಾದ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದು ಅವರು ನುಡಿದರು.

ಇದೇ ವೇಳೆ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಎನ್. ಚನಿಯಪ್ಪ ನಾಯ್ಕ್‌ರನ್ನು ಅಭಿನಂದಿಸಲಾಯಿತು. ಶಾಸಕ ಎನ್.ಎ. ನೆಲ್ಲಿಕುನ್ನು ಮಾತನಾಡಿದರು. ಕ್ಷೇಮಾಭಿವೃದ್ಧಿ ಸಂಘದ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ಪತ್ರಕರ್ತ ಪಿ.ಬಿ. ಹರೀಶ್ ರೈ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು. ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕ.ಸಾ.ಪ. ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಅಧ್ಯಾಪಕ ಸಂಘದ ಅಧ್ಯಕ್ಷ ಸುಕೇಶ್ ಎ, ಅಖಿಲೇಶ್ ನಗುಮುಗಂ, ತೆಕ್ಕೇಕರೆ ಶಂಕರನಾರಾಯಣ ಭಟ್, ಕೆ. ಗಂಗಾಧರ ತೆಕ್ಕೇಮೂಲೆ, ಎ.ಆರ್. ಸುಬ್ಬಯ್ಯಕಟ್ಟೆ ಮಾತನಾಡಿದರು. ಪುರುಷೋತ್ತಮ ಪೆರ್ಲ ಸ್ವಾಗತಿಸಿ, ಶ್ರೀಕಾಂತ್ ಕೆ.ಎಸ್. ವಂದಿಸಿದರು. ವಿ.ಜಿ. ಕಾಸರಗೋಡು ನಿರೂಪಿಸಿದರು. ೩೨ಕ್ಕೂ ಹೆಚ್ಚು ಕನ್ನಡ ಶಾಲೆಗಳಿಗೆ ಪುಸ್ತಕ ವಿತರಿಸಲಾಯಿತು.

You cannot copy contents of this page